ಸುಸಜ್ಜಿತ, ಸ್ವಚ್ಛತೆಯ ಕೊಪ್ಪಳ ನಗರವನ್ನಾಗಿ ನಿರ್ಮಿಸುವ ದೂರದೃಷ್ಟಿಯಿಂದ ಹಂತ-ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಸ್ಲಂ ಬೋರ್ಡ್‌ನಿಂದ ಕೂಡ ಅಭಿವೃದ್ಧಿಗೆ ಅನುದಾನ ತರಲಾಗುತ್ತಿದೆ.

ಕೊಪ್ಪಳ:

ನಗರದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಹಂತ-ಹಂತವಾಗಿ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದಲ್ಲಿ ವಿವಿಧೆಡೆ ₹ 9.84 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು, ಸುಸಜ್ಜಿತ, ಸ್ವಚ್ಛತೆಯ ಕೊಪ್ಪಳ ನಗರವನ್ನಾಗಿ ನಿರ್ಮಿಸುವ ದೂರದೃಷ್ಟಿಯಿಂದ ಹಂತ-ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಸ್ಲಂ ಬೋರ್ಡ್‌ನಿಂದ ಕೂಡ ಅಭಿವೃದ್ಧಿಗೆ ಅನುದಾನ ತರಲಾಗುತ್ತಿದೆ. ಕೊಪ್ಪಳದಲ್ಲಿ ಎರಡ್ಮೂರು ದಿನಕೊಮ್ಮೆ ಕುಡಿಯುವ ನೀರು ಬರುತ್ತಿದ್ದು ಈಗ 24×7 ಕುಡಿಯುವ ನೀರು ಒದಗಿಸುವ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಈ ಮೂಲಕ ಪ್ರತಿ ದಿನ ನೀರು ಪೂರೈಸಲು ಪ್ರಯತ್ನಿಸಲಾಗುವುದು ಎಂದರು.

ಪ್ರತಿ ವಾರ್ಡ್‌ಗೂ ಅನುದಾನ:

ಕೊಪ್ಪಳ ನಗರಸಭೆ ಸದಸ್ಯರ ಸಭೆ ನಡೆಸಿದ ಶಾಸಕರು, ಈ ಬಾರಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ಪ್ರತಿ ವಾರ್ಡ್‌ಗೂ ₹25ರಿಂದ ₹ 30 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸಂಸದ ರಾಜಶೇಖರ್ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಕೊಪ್ಪಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ನಗರಸಭೆ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಸದಸ್ಯರಾದ ಮುತ್ತುರಾಜ್ ಕುಷ್ಟಗಿ, ಮಹೇಂದ್ರ ಚೋಪ್ರಾ, ಗುರುರಾಜ್ ಹಲಿಗೇರಿ, ಆಜೀಮ್ ಅತ್ತರ್, ಬಸಯ್ಯ ಹಿರೇಮಠ, ರಾಜಶೇಖರ್ ಅಡೂರ, ಅರುಣ ಶೆಟ್ಟಿ, ಗಡಾದ, ಕೆ.ಎಂ. ಸೈಯದ್, ಯಮನೂರಪ್ಪ ನಾಯಕ, ರವಿ ಕುರ್ಗೋಡ, ಮಂಜುನಾಥ ಗೊಂಡಬಾಳ, ಮಾರುತಿ ಕಾರಟಗಿ, ಅಕ್ಬರ್ ಪಲ್ಟಾನ್, ಮಾನ್ವಿ ಪಾಷಾ, ಪದ್ಮಾವತಿ ಕಂಬಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗ್ಯಾರಂಟಿ ನಿಲ್ಲಲ್ಲ:

ಪಂಚ ಗ್ಯಾರಂಟಿಗಳು ಯಾವುದೇ ಕಾರಣಕ್ಕೆ ನಿಲ್ಲುವುದಿಲ್ಲ. ಇದನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಗ್ಯಾರಂಟಿ ಯೋಜನೆ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಯಾರೋ ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನನಗೆ ಭರವಸೆ ಇದೆ. ಗ್ಯಾರಂಟಿ ಯೋಜನೆಗಳು ಈಗಿರುವಂತೆಯೇ ಮುಂದುವರಿಯುತ್ತವೆ. ಗ್ಯಾರಂಟಿ ಯೋಜನೆಗಳಿಂದ ಸಮಾನತೆ ಬರುತ್ತಿದೆ. ಬಡವರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.