ಕುಷ್ಟಗಿ: ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಹಾಗೂ ಸಬಲೀಕರಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಹೆಣ್ಣು ಮಗು ಕೇವಲ ಕುಟುಂಬದ ಜವಾಬ್ದಾರಿಯಾಗಿ ನೋಡದೆ, ಸಮಾಜದ ಭವಿಷ್ಯದ ಶಕ್ತಿಯಾಗಿ ಬೆಳೆಸುವ ಅಗತ್ಯವಿದೆ ಎಂದು ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಹೇಳಿದರು.

ತಾಲೂಕಿನ ಕಂದಕೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಪಢಾವೋ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಮಹತ್ವದ ಅರಿವು ಮೂಡಿಸಬೇಕು. ಶಿಕ್ಷಣದಿಂದ ಬಾಲಕಿಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ತಮ್ಮ ಹಕ್ಕುಗಳ ಕುರಿತು ಅರಿವು ಮೂಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಿಸದೆ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪೋಷಕರು ಮತ್ತು ಸಮಾಜ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಹೆಣ್ಣು ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಬಾಲಕಿಯರ ಮೇಲೆ ನಡೆಯಬಹುದಾದ ಯಾವುದೇ ರೀತಿಯ ಶೋಷಣೆ, ಕಿರುಕುಳ ಹಾಗೂ ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗು ತಡೆಯಲು ಜಾಗೃತಿ ಅಗತ್ಯ. ಬಾಲಕಿಯರಿಗೆ ತಮ್ಮ ಹಕ್ಕುಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ತಿಳಿವಳಿಕೆ ನೀಡುವುದರ ಜತೆಗೆ ಸಮಸ್ಯೆ ಎದುರಾದ ಸಂದರ್ಭದಲ್ಲಿ ವಿಶ್ವಾಸದಿಂದ ಪೋಷಕರು, ಶಿಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಧೈರ್ಯ ಬೆಳೆಸಬೇಕು ಎಂದು ತಿಳಿಸಿದರು.

ಹಿರಿಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ಸುರಕ್ಷತೆ ಮತ್ತು ಸಮಾನ ಅವಕಾಶ ಕಲ್ಪಿಸುವುದು ಸಮಾಜದ ಕರ್ತವ್ಯವಾಗಿದೆ. ಹೆಣ್ಣು ಮಗುವಿನ ಶಿಕ್ಷಣವು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಬಾಲಕಿಯರು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾದಾಗ ತಮ್ಮ ಕುಟುಂಬದ ಜತೆಗೆ ದೇಶದ ಅಭಿವೃದ್ಧಿಯಲ್ಲಿಯೂ ಮಹತ್ವದ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಮತ್ತು ಸಮಾನತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಬಾಲಕಿಯರ ಶಿಕ್ಷಣ ಉತ್ತೇಜಿಸುವುದು, ಬಾಲ್ಯವಿವಾಹ ತಡೆಗಟ್ಟುವುದು, ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಹಾಗೂ ಅವರಿಗೆ ಸಮಾನ ಅವಕಾಶ ನೀಡುವ ಕುರಿತು ಅರಿವು ಮೂಡಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ರಮೇಶ್ ಚವ್ಹಾಣ, ಹನಮಂತಪ್ಪ ವಾಲ್ಮೀಕಿ, ಕುಮಾರಸ್ವಾಮಿ ಹಿರೇಮಠ, ಸ್ವಾತಿ, ಶಶಿಕಲಾ, ಬಸಲಿಂಗಮ್ಮ, ಬಸಟ್ಟೆಪ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಿದ್ಯಾರ್ಥಿಗಳು ಇದ್ದರು.