ಧಾರವಾಡ:

ಕೊಲೆ ಹಾಗೂ ಡ್ರಗ್ಸ್‌ ಆರೋಪದಲ್ಲಿ ಜೈಲು ಸೇರಿರುವ ಮೂವರು ಇಲ್ಲಿನ ಕೇಂದ್ರ ಕಾರಾಗೃಹದ ವಾರ್ಡನ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಾದ ರಿಹಾನ್, ಕಾಶಿಫ್ ಹಾಗೂ ಉಡುಪಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಫೈಜಲ್ ಮೂವರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ವಾರ್ಡನ್‌ ಕಿರಣ್ ಘೋರ್ಪಡೆ ಅವರ ಮುಖ, ತಲೆಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮನ್ನೂ ಹೊರಗಡೆ ಓಡಾಡಲು ಬಿಡಿ ಎಂದು ಗಲಾಟೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರಣಾ ಕೈದಿಗಳ ವರ್ತನೆ ಸರಿ ಇಲ್ಲದ್ದರಿಂದ ಬಿಗಿ ಭದ್ರತಾ ಸೆಲ್‌ನಲ್ಲಿ ಇಡಲಾಗಿತ್ತು. ಹೀಗಾಗಿ ಜೂನ್ 11ರಂದು ನಮ್ಮನ್ನೂ ಹೊರಗಡೆ ಬಿಡಿ ಎಂದು ಇವರು ಸಿಬ್ಬಂದಿಯನ್ನು ಕೇಳಿದ್ದರು. ಸಿಬ್ಬಂದಿ ಒಪ್ಪದಿದ್ದಾಗ ಗೋಡೆ ಜಿಗಿದು ಬಂದು ವಾರ್ಡನ್‌ಗೆ ಲಾಠಿಯಿಂದ ತೀವ್ರ ಹಲ್ಲೆ ಮಾಡಿದ್ದಾರೆ. ಈ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸೇವಾನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಆರೋಪಿಗಳಿಗೆ ಒಂದು ತಿಂಗಳ ಕಾಲ ಕುಟುಂಬದವರ ಭೇಟಿ ಮತ್ತು ದೂರವಾಣಿ ಸಂಪರ್ಕ ಸಾಧಿಸಲು ಅವಕಾಶ ಇಲ್ಲ. ಶುಕ್ರವಾರ ಆರೋಪಿಗಳ ಭೇಟಿಗೆ ಬಂದಿದ್ದ ಅವರ ಸಂಬಂಧಿಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಜೈಲು ಅಧೀಕ್ಷಕ ರಘುಪತಿ ಸಿ.ಜೆ. ಮಾಹಿತಿ ನೀಡಿದ್ದಾರೆ.