ಸಾರಾಂಶ
ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಸುಗ್ಗಿ ಸಂಭ್ರಮದಲ್ಲಿ ಚಿಂತಕ ಪೃಥ್ವಿರಾಜ್ ಹಾಲಹಳ್ಳಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜನವಾಣಿ ಬೇರು, ಕವಿವಾಣಿ ಹೂ ಎಂಬಂತೆ ದನಿ ಎತ್ತರಿಸಿ ನುಡಿ ಕತ್ತರಿಸಿದ ಭಾಷೆಯೇ ಜನಪದ ಎಂದು ಸಂಸ್ಕೃತಿ ಚಿಂತಕ, ವಿಚಾರವಾದಿ, ಸಾಹಿತಿ ಪೃಥ್ವಿರಾಜ್ ಹಾಲಹಳ್ಳಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸುಗ್ಗಿ ಸಂಭ್ರಮದಲ್ಲಿ ಮಾತನಾಡಿ, ಜನಪದ ಮತ್ತು ಜಾನಪದ ಎರಡೂ ಬೇರೆ ಬೇರೆ ಎಂದರು. ಡಬ್ಲ್ಯೂಜೆ ಥಾಂಸ್ ೧೮೪೬ ರಲ್ಲಿ ಜಾನಪದ ಎಂಬ ಪದವನ್ನು ಮೊದಲು ಪರಿಚಯಿಸಿದರು. ಕರ್ನಾಟಕದಲ್ಲಿ ಹಾ.ಮಾ.ನಾಯಕ್ ಜನಪದಕ್ಕೆ ಹೊಸ ಅರ್ಥ ಕೊಟ್ಟರು ಎಂದರು. ಬಹುಶಃ ಸಮ ಸಾಹಿತ್ಯಕ್ಕೆ ಬಹು ದೊಡ್ಡ ಅರ್ಥ ಜನಪದ. ಅದು ಬದುಕುವ ದಾರಿಯನ್ನು ಹೇಳಿಕೊಡುತ್ತದೆ. ಆಧುನಿಕತೆಯ ಶಿಷ್ಟ ಸಾಹಿತ್ಯಕ್ಕೆ ಮೂಲವೇ ಜನಪದ. ಅದು ಸಮಾಜದ ಅನೇಕ ಅಂಕುಡೊಂಕುಗಳಿಗೆ ಸಿದ್ದೌಷದ ಎಂದರು.ಪೃಥ್ವಿರಾಜ್ ಹಾಲಹಳ್ಳಿ ಮಾತಿನ ಜೊತೆಗೆ ಜನಪದ ಗೀತೆಯನ್ನು ಹಾಡಿ ರಂಜಿಸಿದರು. ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಆಶಯದೊಂದಿಗೆ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ವಸ್ತು ಪ್ರದರ್ಶನ ಮತ್ತು ದೇಸಿ ಆಟಗಳ ಮನರಂಜನೆ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಆಯೋಜಿಸಲಾಗಿತ್ತು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಮಂಡಳಿ ಕಾರ್ಯಾಧ್ಯಕ್ಷ ಬಿ.ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರಮೇಶ ಮಾತನಾಡಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಲಕ್ಷ್ಮೀ ಎಸ್.ಎಸ್, ಐಕ್ಯೂಎಸಿ ಸಂಚಾಲಕ ವಿಜಯಕುಮಾರ್, ಕಚೇರಿ ಅಧೀಕ್ಷಕ ಪುಟ್ಟಬುದ್ಧಿ ಎನ್, ಅಧ್ಯಾಪಕ ವೃಂದ, ಅಧ್ಯಾಪಕೇತರ ವೃಂದ, ವಿದ್ಯಾರ್ಥಿಗಳಿದ್ದರು.