ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿಗೆ ಖಾಸಗಿ ಕೊಳವೆಬಾವಿಗಳೇ ಆಧಾರ

| Published : Mar 12 2024, 02:11 AM IST

ಸಾರಾಂಶ

ಈಗಾಗಲೇ ೬ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಒದಗಿಸಲಾಗುತ್ತಿದ್ದು, ಶೀಘ್ರ ತಾಲೂಕಿನ ೫೩ ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಗೊಳಗಾಗುವ ಆತಂಕ ಜಿಪಂ ಹಾಗೂ ತಾಪಂ ಆಡಳಿತಕ್ಕೆ ಎದುರಾಗಿದೆ.

ಮಾರುತಿ ಶಿಡ್ಲಾಪುರಕನ್ನಡಪ್ರಭ ವಾರ್ತೆ ಹಾನಗಲ್ಲ

ಈಗಾಗಲೇ ೬ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಒದಗಿಸಲಾಗುತ್ತಿದ್ದು, ಶೀಘ್ರ ತಾಲೂಕಿನ ೫೩ ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಗೊಳಗಾಗುವ ಆತಂಕ ಜಿಪಂ ಹಾಗೂ ತಾಪಂ ಆಡಳಿತಕ್ಕೆ ಎದುರಾಗಿದೆ.

ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡಿರಲಿಲ್ಲ. ೪೨ ಗ್ರಾಪಂ ವ್ಯಾಪ್ತಿಯಲ್ಲಿ ೧೬೦ ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಸವಾಲು ಈಗ ಅಧಿಕಾರಿಗಳ ಹೆಗಲಿಗೆ ಬಿದ್ದಿದೆ. ಈಗಾಗಲೇ ಕೆಲವೆಡೆ ಹೊಸ ಕೊಳವೆ ಬಾವಿ ಕೊರೆಯಲಾಗಿದ್ದು, ಕೆಲವು ನೀರು ಬಂದಿವೆ. ಕೆಲವು ಕೊಳವೆ ಬಾವಿಗಳಿಗೆ ನೀರು ಸಿಗಲಿಲ್ಲ. ಶೀಘ್ರ ಸಮಸ್ಯೆ ಉದ್ಭವಿಸಬಹುದಾದ ೫೩ ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ. ಪಂಚಾಯಿತಿಯ ಕೊಳವೆ ಬಾವಿಗಳು ನೀರು ಬಂದಾದರೆ ಖಾಸಗಿ ಕೊಳವೆ ಬಾವಿಗಳಿಂದಲೇ ನೀರೊದಗಿಸುವ ಅನಿವಾರ್ಯತೆ, ಯೋಜನೆ ಮಾಡಲಾಗಿದೆ. ಮಾರ್ಚ್‌ ಹೊತ್ತಿಗೆ ನೂರಕ್ಕೂ ಅಧಿಕ ಹಳ್ಳಿಗಳು ನೀರಿನ ಕೊರತೆಗೆ ಈಡಾಗಬಹುದು ಎಂದು ಅಂದಾಜಿಸಲಾಗಿದೆ.

ಈಗಾಗಲೇ ತಾಲೂಕಿನ ಕಂಚಿನೆಗಳೂರು ಪ್ಲಾಟ್, ಇನಾಂದ್ಯಾಮನಕೊಪ್ಪ, ಸೋಮಸಾಗರ, ಚೀರನಹಳ್ಳಿ, ಹೊಂಕಣ ಗ್ರಾಮಗಳಿಗೆ ರೈತರ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಒದಗಿಸುವ ಕೆಲಸ ನಡೆದಿದೆ. ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಒಟ್ಟು ೮೦೪ ಕೊಳವೆ ಬಾವಿಗಳಿವೆ. ಇವುಗಳಲ್ಲಿ ೫೮೦ ಕೊಳವೆ ಬಾವಿಗಳು ಮಾತ್ರ ನೀರೊದಗಿಸುತ್ತಿವೆ. ಆದರೆ ಇರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೆಲವು ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂದು ಗುರುತಿಸಲಾಗಿದೆ. ತಾಲೂಕಿನಾದ್ಯಂತ ೨೭೭ ಒವರ್‌ಹೆಡ್ ಟ್ಯಾಂಕ್‌ಗಳಿದ್ದು, ೬೪೯ ಸಣ್ಣ ನೀರು ಸರಬರಾಜು ಸಿಸ್ಟರ್ನ್‌ಗಳಿವೆ. ಜಾನುವಾರುಗಳಿಗಾಗಿ ೧೧೦ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮಾರ್ಚ್‌, ಏಪ್ರಿಲ್ ತಿಂಗಳಿನಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಒಂದು ದೊಡ್ಡ ಸವಾಲಾಗಿದೆ. ಇದರ ನಡುವೆ ತಾಲೂಕಿನಲ್ಲಿ ೧೧೯ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆದರೆ ಇದರಲ್ಲಿ ೨೮ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಅಳವಡಿಸಿರುವ ಕ್ವಾಯನ್ ಬಾಕ್ಸ್‌ ಕಳ್ಳತನ, ಅಲ್ಲದೆ ಘಟಕದ ಸಣ್ಣ ಪುಟ್ಟ ಯಂತ್ರದ ವಸ್ತುಗಳನ್ನು ಕಳ್ಳತನ ಮಾಡುತ್ತಿರುವುದು ಇಲಾಖೆಗೆ ತಲೆ ನೋವಾಗಿದೆ.

ಧರ್ಮಾ ವರದಾ ನದಿಗಳು ನೀರು ಹರಿಯುವಿಕೆ ನಿಲ್ಲಿಸಿ ಎರಡು ಮೂರು ತಿಂಗಳುಗಳೇ ಆಗಿದೆ. ಮುಂಗಾರಿಗಿಂತ ಮೊದಲು ಅಡ್ಡ ಮಳೆಗಳೇನಾದರೂ ದೊಡ್ಡ ಪ್ರಮಾಣದಲ್ಲಿ ಬಂದರೆ ಅಧಿಕಾರಿಗಳು, ಜನರು ಒಂದಷ್ಟು ನಿಟ್ಟುಸಿರು ಬಿಡಬಹುದಾದ ಸ್ಥಿತಿ ಇದೆ.

ಗ್ರಾಮಸ್ಥರು ಕೂಡ ನೀರಿನ ಬಳಕೆ ಮಿತಗೊಳಿಸಬೇಕು. ಅನಗತ್ಯವಾಗಿ ನಳದಲ್ಲಿ ನೀರು ಹರಿದು ಪೋಲಾಗದಂತೆ ನಿಗಾ ವಹಿಸಬೇಕು. ನಾಳೆಗಾಗಿ ನೀರು ಕಾಯ್ದುಕೊಳ್ಳಬೇಕು. ಇದಕ್ಕಾಗಿ ಇಲಾಖೆಯೂ ಕೂಡ ಡಂಗೂರ ಸಾರಿಸಿ ಜಾಗೃತಿ ಮೂಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ನೀರಿನ ಟ್ಯಾಂಕ್‌ಗಳು ನಮಗಾಗಿವೆ ಎಂಬ ಅರಿವು ಮೂಡಬೇಕು. ನಾಳೆಯ ನೀರಿಗಾಗಿ ಇಂದೇ ಎಚ್ಚರಗೊಳ್ಳುವ ಅಗತ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯೂ ನಿರ್ಲಕ್ಷ್ಯಕ್ಕೆ ಅವಕಾಶ ನೀಡಿಲ್ಲ. ಇಲಾಖೆಯ ಕೊಳವೆ ಬಾವಿಗಳಿಂದ ನೀರೊದಗಿಸಲು ಸಾಧ್ಯವಾಗದಿದ್ದರೆ ಖಾಸಗಿ ಕೊಳವೆ ಬಾವಿ ಗುರುತಿಸಿ ಕುಡಿಯುವ ನೀರು ಕೊಡಲು ಯೋಜನೆ ಮಾಡಲಾಗಿದೆ. ಎಲ್ಲಿಯೂ ಟ್ಯಾಂಕರ್‌ನಿಂದ ನೀರು ಒದಗಿಸುವ ಪರಿಸ್ಥಿತಿ ಒದಗಿಲ್ಲ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್. ದೇವರಾಜ ಹೇಳಿದರು.

ಪ್ರತಿ ಗ್ರಾಪಂನಲ್ಲಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಕುಡಿಯುವ ನೀರಿನ ವಿಷಯದಲ್ಲಿ ನಿಷ್ಕಾಳಜಿಗೆ ಅವಕಾಶವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮಾರ್ಚ್‌ ಅಂತ್ಯದ ಹೊತ್ತಿಗೆ ಸಮಸ್ಯೆ ಆಗಬಹುದಾದ ಗ್ರಾಮ ಗುರುತಿಸಲಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಇರುವ ನೀರು ಪೋಲಾಗದಂತೆ ಗ್ರಾಮಸ್ಥರೂ ಜಾಗೃತಿ ವಹಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಹಾಗೂ ಸ್ವಚ್ಛತೆ ವಿಭಾಗ ಎಇಇ ಸಿ.ಎ. ನೆಗಳೂರ ಮನವಿ ಮಾಡಿದರು.