ಹಳ್ಳಕ್ಕೆ ಬಿದ್ದ ಖಾಸಗಿ ಬಸ್‌: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

| Published : Sep 03 2025, 01:01 AM IST

ಹಳ್ಳಕ್ಕೆ ಬಿದ್ದ ಖಾಸಗಿ ಬಸ್‌: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಸೇತುವೆ ಮೇಲಿಂದ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಅಣಜಿಗೆರೆ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಸೇತುವೆ ಮೇಲಿಂದ ಹಳ್ಳಕ್ಕೆ ಪಲ್ಟಿಯಾದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ತಾಲೂಕಿನ ಅಣಜಿಗೆರೆ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ದಾವಣಗೆರೆಯಿಂದ ಉಚ್ಚಂಗಿದುರ್ಗ, ಮಾದಿಹಳ್ಳಿ ಮಾರ್ಗವಾಗಿ ಬನಶಂಕರಿ ಖಾಸಗಿ ಬಸ್‌ ಹರಪನಹಳ್ಳಿ ಕಡೆಗೆ ಸಂಚಾರ ಮಾಡುತ್ತಿತ್ತು. ಬಸ್ಸಿನಲ್ಲಿ 28 ಜನ ಪ್ರಯಾಣಿಸುತ್ತಿದ್ದರು. ಅಣಜಿಗೆರೆ ಬಳಿಯಿರುವ ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿ ಹೊಡೆದು ಹಳ್ಳಕ್ಕೆ ಉರುಳಿದೆ.

ಗಾಯಾಳುಗಳು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇನ್ನು ಗಂಭೀರ ಗಾಯಗೊಂಡ ನಾಲ್ವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಅರಸೀಕರೆ ಪೊಲೀಸ್ ಠಾಣೆ ಪಿಎಸ್‌ಐ ವಿಜಯಕೃಷ್ಣ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಾಹನ ಡಿಕ್ಕಿ, ಕರಡಿ ಸಾವು:

ಆಹಾರ ಹುಡುಕಿಕೊಂಡು ಬಂದಿದ್ದ ನಾಲ್ಕೈದು ವರ್ಷದ ಗಂಡು ಕರಡಿ ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಗಿನ ಜಾವ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯ ಬಿಲ್ವಪತ್ರೆ ವನದ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.ಬಣವಿಕಲ್ಲು - ಅಮಲಾಪುರ ರಸ್ತೆಯ ಮಧ್ಯದ ಊಟಿ ಬಾವಿಕಡೆಯಿಂದ ದೈವಿವನದ ಕಡೆಯ ಅರಣ್ಯ ಪ್ರದೇಶದತ್ತ ಹೋಗಲು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಿಂದ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ಘಟನಾ ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣ ಬಣವಿಕಲ್ಲು ಅರಣ್ಯಪ್ರದೇಶ ವ್ಯಾಪ್ತಿಯ ಸಿಬ್ಬಂದಿ ವಾಚರಿ ಮೇಘನಾ, ಕಾವಲುಗಾರರಾದ ಸಿದ್ದಲಿಂಗಪ್ಪ, ದುರುಗಪ್ಪ, ಮಲ್ಲೇಶ, ಮಂಜು, ಸೂಲದಹಳ್ಳಿ ಕೊಟ್ರೇಶ, ತಿಪ್ಪೇಶ್ ಇತರರು ಸ್ಥಳಕ್ಕೆ ಧಾವಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಸಂದೀಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಶುವೈದ್ಯಾಧಿಕಾರಿಗಳು ಕರಡಿಯ ಶವಪರೀಕ್ಷೆ ನಡೆಸಿದ ನಂತರ ಅಲ್ಲೇ ಸಮೀಪದ ಅರಣ್ಯ ಪ್ರದೇಶದಲ್ಲಿ ಇಲಾಖೆಯ ನಿಯಮಾವಳಿಯಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಕರಡಿ ಸಾವಿಗೆ ಕಾರಣವಾದ ಅಪರಿಚಿತ ವಾಹನದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಕೂಡ್ಲಿಗಿ ವಲಯ ಅರಣ್ಯ ಅಧಿಕಾರಿ ಸಂದೀಪ ನಾಯಕ ತಿಳಿಸಿದ್ದಾರೆ.