ನಿಲ್ದಾಣದಲ್ಲಿ ಸರ್ಕಾರಿ ಬಸ್‌ ಬದಲಿಗೆ ಖಾಸಗಿ ಬಸ್ಸುಗಳು

| Published : Aug 05 2025, 11:45 PM IST

ನಿಲ್ದಾಣದಲ್ಲಿ ಸರ್ಕಾರಿ ಬಸ್‌ ಬದಲಿಗೆ ಖಾಸಗಿ ಬಸ್ಸುಗಳು
Share this Article
  • FB
  • TW
  • Linkdin
  • Email

ಸಾರಾಂಶ

ರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ಬಸ್ ಗಳು ನಿಲ್ದಾಣಕ್ಕೆ ಬಾರದೇ ಮಂಗಳವಾರ ನಿಲ್ದಾಣ ಖಾಲಿ ಖಾಲಿ ಇರುವುದು ಕಂಡುಬಂದಿತು. ಈ ವೇಳೆ ಖಾಸಗಿ ವಾಹನದ ಮಾಲೀಕರ ಮತ್ತು ಚಾಲಕರ ಜೊತೆ ಸಾರಿಗೆ ಸಂಸ್ಥೆ ಅಧಿಕಾರಿ, ಆರ್‌.ಟಿ.ಒ. ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಪ್ರಯಾಣಿಕರಿಗೆ ಯಾವ ತೊಂದರೆ ಆಗದಂತೆ ಎಲ್ಲಾ ಖಾಸಗಿ ವಾಹನಗಳು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಸೂಚನೆ ಮೆರೆಗೆ ಖಾಸಗಿ ವಾಹನಗಳು ಸಂಚರಿಸಿದವು. ಸಾರಿಗೆ ಬಸ್ ಇಲ್ಲದೆ ದೂರದ ಊರುಗಳಿಂದ ಬರುವವರು ಅನೇಕರು ಬರಲಿಲ್ಲ. ಈ ಕಾರಣ ಬಸ್ ನಿಲ್ದಾಣದಲ್ಲಿ ಅಷ್ಟೊಂದು ಪ್ರಯಾಣಿಕರು ಕಾಣಿಸಲಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ಕೆಎಸ್ಸಾರ್ಟಿಸಿ ಬಸ್ ಮುಷ್ಕರದ ಸುದ್ದಿ ಮೊದಲೇ ತಿಳಿದಿದ್ದರಿಂದ ಜನರು ಕೂಡ ಮುನ್ನೆಚ್ಚರಿಕೆ ವಹಿಸಿ ತಮ್ಮ ಪ್ರಯಾಣವನ್ನು ಮುಂದೂಡಿದ್ದರು. ಹಾಗಾಗಿ ನಿಲ್ದಾಣದ ಕಡೆ ಹೆಚ್ಚಿನ ಜನರು ಬರಲಿಲ್ಲ. ಹಾಗಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಖಾಸಗೀ ಬಸ್‌ಗಳು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ನಿಂತರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಾರದ ಕಾರಣ ಖಾಸಗಿ ಬಸ್‌ಗಳು ಕೂಡ ಖಾಲಿ ಹೊಡೆಯುತ್ತಿದ್ದವು.

ರಾತ್ರಿಯಿಂದಲೇ ಕೆಎಸ್ಸಾರ್ಟಿಸಿ ಬಸ್ ಗಳು ನಿಲ್ದಾಣಕ್ಕೆ ಬಾರದೇ ಮಂಗಳವಾರ ನಿಲ್ದಾಣ ಖಾಲಿ ಖಾಲಿ ಇರುವುದು ಕಂಡುಬಂದಿತು. ಈ ವೇಳೆ ಖಾಸಗಿ ವಾಹನದ ಮಾಲೀಕರ ಮತ್ತು ಚಾಲಕರ ಜೊತೆ ಸಾರಿಗೆ ಸಂಸ್ಥೆ ಅಧಿಕಾರಿ, ಆರ್‌.ಟಿ.ಒ. ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಪ್ರಯಾಣಿಕರಿಗೆ ಯಾವ ತೊಂದರೆ ಆಗದಂತೆ ಎಲ್ಲಾ ಖಾಸಗಿ ವಾಹನಗಳು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಸೂಚನೆ ಮೆರೆಗೆ ಖಾಸಗಿ ವಾಹನಗಳು ಸಂಚರಿಸಿದವು. ಸಾರಿಗೆ ಬಸ್ ಇಲ್ಲದೆ ದೂರದ ಊರುಗಳಿಂದ ಬರುವವರು ಅನೇಕರು ಬರಲಿಲ್ಲ. ಈ ಕಾರಣ ಬಸ್ ನಿಲ್ದಾಣದಲ್ಲಿ ಅಷ್ಟೊಂದು ಪ್ರಯಾಣಿಕರು ಕಾಣಿಸಲಿಲ್ಲ.

ಭದ್ರತೆಯೊಂದಿಗೆ ಕೆಂಪು ಬಸ್‌:

ಮಂಗಳವಾರ ಮಧ್ಯಾಹ್ನದ ವೇಳೆಗೆ ಒಂದು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ಎಸ್ಕಾರ್ಟ್ ಮೂಲಕ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿತು. ವಿಷಯ ತಿಳಿದ ಖಾಸಗಿ ಬಸ್‌ ಹಾಗೂ ಮ್ಯಾಕ್ಸಿಕ್ಯಾಬ್‌ ಚಾಲಕರು ಹಾಗೂ ಮಾಲೀಕರು ಬಸ್ ಮುಂದೆ ನಿಂತು ಸಂಸ್ಥೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರ ನಡುವೆಯು ಪೊಲೀಸ್ ಭದ್ರತೆಯೊಂದಿಗೆ ಬಸ್ ಬೆಂಗಳೂರಿಗೆ ಹೊರಟಿತು. ನಿಲ್ದಾಣದ ಮುಂಭಾಗ ಸಂಘದ ನೌಕರರು ಬಂದ ಕೂಡಲೇ ಬಸ್ ಚಾಲಕ ರಸ್ತೆ ಮಧ್ಯೆಯೇ ಬಸ್‌ ನಿಲ್ಲಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ ಘಟನೆ ನಡೆಯಿತು. ಮುಷ್ಕರವಿದ್ದರೂ ರಸ್ತೆಯಲ್ಲಿ ಕೆಂಪು ಬಸ್‌ ಕಂಡು ಸಿಟ್ಟಿಗೆದ್ದ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು ಎಲ್ಲಾ ವಾಹನವನ್ನು ನಿಲ್ದಾಣದಿಂದ ಹೊರ ತೆಗೆದರು. ಎಷ್ಟೊ ಸಮಯವಾದ ಮೇಲೆ ಕೆಎಸ್ಸಾರ್ಟಿಸಿ ಸಂಸ್ಥೆಯವರು ಸಮಧಾನಪಡಿಸಿ ಮತ್ತೆ ನಿಲ್ದಾಣಕ್ಕೆ ಖಾಸಗೀ ವಾಹನ ಬರುವಂತೆ ಮಾಡಲು ಯಶಸ್ವಿಯಾದರು.

ಮುಷ್ಕರ ಮಾಡಿದಾಗ ನಾವು ಬೇಕಾ...?

ಇದೇ ವೇಳೆ ಖಾಸಗಿ ವಾಹನ ಚಾಲಕ ರಾಜೇಶ್ ಮಾಧ್ಯಮದೊಂದಿಗೆ ಮಾತನಾಡಿ, ಸರಕಾರ ನೆಚ್ಚಿಕೊಂಡು ನಾವು ಲಕ್ಷಾಂತರ ರು. ಗಳ ಬಂಡವಾಳ ಹಾಕಿಲ್ಲ. ನಮ್ಮಪ್ಪನ ಮನೆಯದು ಹಣ ತಂದು ಹಾಕಿರುವುದು. ಇವರು ಮುಷ್ಕರ ಮಾಡಿದಾಗ ನಾವು ಬಸ್ ಓಡಿಸಿ ಜೀವನ ಮಾಡಬೇಕೆಂದು ಬಂಡವಾಳ ಹಾಕಿಲ್ಲ. ಆರ್‌.ಟಿ.ಓ. ಇಲಾಖೆ ಅಧಿಕಾರಿಗಳ ಮಾತಿಗೆ ಬೆಲೆಕೊಟ್ಟು ಗಾಡಿಯನ್ನು ನಿಲ್ದಾಣಕ್ಕೆ ಹಾಕಿದ್ದೇವೆ. ಸಭೆ ಮಾಡಿ ಜನರಿಗೆ ತೊಂದರೆ ಆಗಬಾರದು. ಆ ಉದ್ದೇಶದಲ್ಲಿ ನೀವು ಆಪರೇಟ್ ಮಾಡಿ ಎಂದಿದ್ದರು. ಈ ವೇಳೆ ಸಾರಿಗೆ ಇಲಾಖೆಯವರು ಯಾವುದೋ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತಂದಿದ್ದಾರೆ. ಆ ಚಾಲಕ ಇಲಾಖೆಯಲ್ಲಿ ಕೆಲಸವನ್ನೇ ಮಾಡುತ್ತಿಲ್ಲ ಎಂದು ದೂರಿದರು. ಡ್ಯೂಟಿಯಲ್ಲಿ ಇರದ ಚಾಲಕನನ್ನು ಕರೆದುಕೊಂಡು ಬಂದು ಬಸ್ ಓಡಿಸಲು ಮುಂದಾಗಿದ್ದಾರೆ. ಉದ್ದೇಶಪೂರ್ವಕವಾಗಿ ನಾವೇನು ವಾಹನ ತಂದಿರುವುದಿಲ್ಲ, ಎಸ್ಪಿ, ಆರ್‌.ಟಿ.ಓ., ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದಕ್ಕೆ ತಂದಿದ್ದೇ ಟಿಕೆಟ್ ದರ ಕೂಡ ಹೆಚ್ಚಿಗೆ ಮಾಡಿರುವುದಿಲ್ಲ. ಅವರ ಸ್ವತ್ತು ಅವರಿಗೆ ಬಿಟ್ಟುಕೊಟ್ಟು ವಾಪಸ್ ಹೋಗುವುದಾಗಿ ಹೇಳಿದರು.ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಕೊರತೆ:

ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರ ಮುಷ್ಕರದಿಂದ ಕಾಲೇಜು ವಿದ್ಯಾರ್ಥಿಗಳು ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಂದ ಬರಲಾಗಲಿಲ್ಲ. ಹಾಗಾಗಿ ಜಿಲ್ಲೆಯ ಬಹುತೇಕ ಕಾಲೇಜುಗಳ ತರಗತಿಗಳು ಖಾಲಿ ಹೊಡೆದವು. ಸ್ವಂತ ವಾಹನ ಇರುವವರಿಗೆ ಯಾವ ಸಮಸ್ಯೆ ಆಗಲಿಲ್ಲ. ಕೆಲ ವಿದ್ಯಾರ್ಥಿಗಳು ಇತರೆ ವಾಹನಗಳಲ್ಲಿ ತೆರಳಿದರು.

2 ವರ್ಷಗಳ ನಂತರ ದುಡ್ಡು ಕೊಟ್ಟ ಮಹಿಳೆಯರು:

ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ಬಂದ ನಂತರದಲ್ಲಿ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಕಳೆದ ಎರಡು ವರ್ಷಗಳಿಂದ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರು. ಆದರೆ, ಇದೀಗ ಮೊದಲ ಬಾರಿಗೆ ಖಾಸಗಿ ಬಸ್‌ಗಳಲ್ಲಿ ಹಣ ಕೊಟ್ಟು ಪ್ರಯಾಣಿಸಲು ಇರುಸುಮುರುಸು ಅನುಭವಿಸಿದರು.