ಸಾರಾಂಶ
ಅಂಕೋಲಾ: ಜು. 16ರಂದು ಶಿರೂರು ಗುಡ್ಡ ಕುಸಿತದ ಅವಘಡಕ್ಕೆ ಸಂಬಂಧಿಸಿದಂತೆ ಐಆರ್‌ಬಿ ಕಂಪನಿಯ 8 ಜನರ ವಿರುದ್ಧ ಕೊಲೆ ಕೇಸ್‌ಅನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ದಾಖಲಿಸಿದ್ದಾರೆ.
ಪ್ರಣವಾನಂದ ಸ್ವಾಮೀಜಿಯವರು ನೀಡಿರುವ ದೂರಿನಲ್ಲಿ, ಐಆರ್‌ಬಿ ಕಂಪನಿಯ ವ್ಯವಸ್ಥಾಪಕ, ನಿರ್ದೇಶಕ ವೀರೇಂದ್ರ ಡಿ. ಮಹೇಶ್ಕರ, ನಿರ್ದೇಶಕರಾದ ರವೀಂದ್ರ ದಾರಿವಾಲ್, ಜೋಶ್ ತಮಾರಿಸ್ ಮಾರ್ಟಿ ಬೊನ್ನಾರ್, ದೀಪಾಲಿ ಯು. ಹೆಸ್ಕರ್, ಎನ್. ಭಟ್, ಭಜರಂಗ ಲಾಲ್ ಗುಪ್ತಾ, ಸಂದೀಪ ಜೈಶಾ, ಪ್ರಥ್ವಿ ಸೌವಾಲ್ ಎಂಬವರ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ.ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜು. 16ರಂದು ಶಿರೂರು ಗುಡ್ಡ ಕುಸಿತದಿಂದಾಗಿ 8 ಜನರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಚತುಷ್ಪಥ ರಸ್ತೆಯಲ್ಲಿ ಸಾಕಷ್ಟು ಸಾವು- ನೋವು ಉಂಟಾಗುತ್ತಿದೆ. ಆದರೆ ಐಆರ್‌ಬಿ ಕಂಪನಿ ವಿರುದ್ಧ ಸರ್ಕಾರ ದೂರು ನೀಡಿಲ್ಲ. ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಶಿರೂರು ದುರ್ಘಟನೆ ಹಿಂದೆ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಎಫ್‌ಐಆರ್ ಮಾಡಿಲ್ಲ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನ್ಯಾಯಾಲಯದ ಮೂಲಕ ಖಾಸಗಿ ದೂರನ್ನು ದಾಖಲಿಸಲಾಗಿದೆ. ಈ ದುರಂತ ನಡೆದರೂ ಕೂಡ ಆಡಳಿತವರ್ಗ ಜಾಗೃತರಾಗದಿರುವುದು ದೌರ್ಭಾಗ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಗುಂಡ ಕುಂಬಾರ ಸ್ವಾಮೀಜಿ, ನ್ಯಾಯವಾದಿ ಸುಭಾಷ್ ಖೈರನ್, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ದಾಮೋದರ ಜಿ. ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೊಂಡಳ್ಳಿ, ತಾಲೂಕು ಉಪಾಧ್ಯಕ್ಷ ರಮೇಶ ಎಸ್. ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ ಗೋಕರ್ಣ, ಮಂಜುನಾಥ ನಾಯ್ಕ, ಶ್ರೀನಿವಾಸ ನಾಯ್ಕ, ವಿನೋದ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
----ಚಿರೆಕಲ್ಲು ಗಣಿಗಾರಿಕೆಗೆ ವಿರೋಧ
ಗೋಕರ್ಣ: ಇಲ್ಲಿನ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಕೆಳಭಾಗದ ಭಾಗದಲ್ಲಿರುವ ಹತ್ತು ಮನೆಗಳ ಮೇಲೆ ಗುಡ್ಡ ಕುಸಿಯುವ ಆತಂಕವಿದ್ದು, ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜನರು ಗಣಿಗಾರಿಕಾ ಪ್ರದೇಶಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಗಣಿಗಾರಿಕೆ ಬಂದ್ ಮಾಡಿಸಿದ್ದಾರೆ.ಕಳೆದ ಹಲವು ತಿಂಗಳಿಂದ ಗ್ರಾಮ ಪಂಚಾಯಿತಿಗೆ ಮನವಿ ನೀಡಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಮುಂಜಾನೆಯವರೆಗೆ ಜೀವ ಭಯದಲ್ಲಿ ಕಳೆದಿದ್ದೇವೆ. ಯಾವ ಕ್ಷಣದಲ್ಲೂ ಗುಡ್ಡ ಕುಸಿಯುವ ಆತಂಕವಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಂಜುನಾಥ, ಕಂದಾಯ ನಿರೀಕ್ಷಕ ಸಂತೋಷ ಶೇಟ್, ಗ್ರಾಮ ಲೆಕ್ಕಾಧಿಕಾರಿ ಮಂಜಪ್ಪ, ಗ್ರಾಪಂ ಸದಸ್ಯರಾದ ಶಾರದ ಮೂಡಂಗಿ, ರವಿಕಿರಣ ನಾಯ್ಕ ಸ್ಥಳೀಯರಾದ ಶುಕ್ರು ಗೌಡ, ತುಕಾರಾಮ ಗೌಡ, ಶಿವರಾಮ ಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.