ಶಿಕ್ಷಣ ಅಧಿಕಾರಿಗಳ ಮೇಲೆ ಖಾಸಗಿ ಶಾಲೆಗಳು ಗರಂ

| Published : May 14 2024, 01:03 AM IST

ಸಾರಾಂಶ

ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅತಂತ್ರಗೊಂಡಿದೆ. ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಮುಗಿಸುವ ಹುನ್ನಾರವೂ ಇದರ ಹಿಂದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿಯಲೂ ಇದೇ ಕಾರಣ. ಇಂಥ ಅಧಿಕಾರಿಗಳಿಗಳ ಎತ್ತಂಗಡಿಗೆ ಸಿಎಂ ಕೂಡಲೇ ಕ್ರಮ ವಹಿಸಬೇಕೆಂದು ಕೆಪಿಎಂಟಿಸಿಸಿ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರಾಜ್ಯದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅತಂತ್ರಗೊಂಡಿದೆ. ರಾಜ್ಯ ಪಠ್ಯಕ್ರಮದ ಶಾಲೆಗಳನ್ನು ಮುಗಿಸುವ ಹುನ್ನಾರವೂ ಇದರ ಹಿಂದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿಯಲೂ ಇದೇ ಕಾರಣ. ಇಂತಹ ಅಧಿಕಾರಿಗಳಿಗೆ ಚಾಟಿ ಬೀಸಿ, ಎತ್ತಂಗಡಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ರಮ ವಹಿಸಬೇಕೆಂದು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ) ಆಗ್ರಹಿಸಿದೆ.

ಈ ಸಂಬಂಧ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಕ್ಯಾಮ್ಸ್‌, ಕುಸ್ಮಾ, ಮಾಸ್‌, ಮಿಕ್ಸಾ, ಎಬಿಇ, ಸೆಕ್‌, ಕುಮ್ಸಾ, ಐಎಸ್‌ಎಫ್‌ಐ, ಟಿಯು ಮತ್ತಿತರ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಾದ ಡಿ.ಶಶಿಕುಮಾರ್‌, ಸತ್ಯಮೂರ್ತಿ, ಆನಂದ್‌, ಬಾಬು, ಶೇಖರ್‌, ನಟೇಶ್‌, ಸುಪ್ರೀತ್‌ ಮತ್ತಿತರರು ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಶಿಕ್ಷಣ ಹಾಗೂ ಕಲಿಕಾ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸದೆ ಹೋದರೆ ಅನಿವಾರ್ಯವಾಗಿ ಸಾಂಕೇತಿಕ ಪ್ರತಿಭಟನೆಗೂ ನಾವು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೂಡಲೇ ಮುಖ್ಯಮಂತ್ರಿ ಅವರು ಶಿಕ್ಷಣ ವ್ಯವಸ್ಥೆಯ ಲೋಪದೋಷಗಳನ್ನು ಚರ್ಚಿಸಲು ಸಭೆ ಕರೆಯಬೇಕೆಂದು ಆಗ್ರಹಿಸಿದರು.

ಕೆಪಿಎಂಟಿಸಿಸಿ ಸಂಚಾಲಕ ಡಿ.ಶಶಿಕುಮಾರ್‌ ಮಾತನಾಡಿ, ಸಿಸಿ ಕ್ಯಾಮರಾ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.30ರಷ್ಟು ಕುಸಿದಿದೆ ಎಂಬ ಅಧಿಕಾರಿಗಳ ಹೇಳಿಕೆ ಸಂಪೂರ್ಣ ಸುಳ್ಳು. ಫಲಿತಾಂಶ ಕುಸಿಯಲು ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ. ಅಸಲಿಗೆ ನಮಗಿರುವ ಮಾಹಿತಿ ಪ್ರಕಾರ ಶೇ.20ರಷ್ಟು ಗ್ರೇಸ್‌ ಅಂಕ ನೀಡಿದರೂ ಪಾಸಾಗದಂತಹ ಸಾಕಷ್ಟು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 14, 15, 16 ಅಂಕ ಪಡೆದಿದ್ದರೆ ಅವರಿಗೆ ಕರೆಕ್ಷನ್‌ ಮಾಡುವಾಗ 20 ಅಂಕಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಅವರು ಗ್ರೇಸ್‌ ಅಂಕಕ್ಕೆ ಅರ್ಹರಾಗಿ ಪಾಸಾಗಿದ್ದಾರೆ. ಇಲ್ಲದಿದ್ದರೆ ಇನ್ನಷ್ಟು ಫಲಿತಾಂಶ ಕುಸಿಯುತ್ತಿತ್ತು ಎಂದು ಆರೋಪಿಸಿದರು.

ಸಚಿವರು ಕೈಗೇ ಸಿಗುತ್ತಿಲ್ಲ:

ಇನ್ನು, ಶಿಕ್ಷಣ ಇಲಾಖೆಗೆ ಸಚಿವರು ಇದ್ದಾರೋ ಇಲ್ಲವೋ ಅರ್ಥವಾಗುತ್ತಿಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಕೈಗೇ ಸಿಗುತ್ತಿಲ್ಲ. ಸಚಿವರು ಇನ್ನಾದರೂ ಭಾಗೀದಾರರ ಕೈಗೆ ಸಿಗುವಂತಾಗಬೇಕು. ಅಧಿಕಾರಿಗಳನ್ನು ಎಚ್ಚರಿಸಿ ಸರ್ಕಾರಿ ಶಾಲೆಗಳೂ ಸೇರಿದಂತೆ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಗುಣಮಟ್ಟ ಕಾಪಾಡಲು ಕ್ರಮ ವಹಿಸುವಂತೆ 13 ಅಂಶಗಳ ಸಲಹೆಗಳನ್ನು ಇದೇ ವೇಳೆ ಪದಾಧಿಕಾರಿಗಳು ನೀಡಿದರು.