ಸಾರಾಂಶ
ಬೆಂಗಳೂರು : ಭಾರತದ ಖಾಸಗಿ ರಕ್ಷಣಾ ಉತ್ಪಾದನಾ ಕಂಪನಿ ಅಲ್ಫಾ ಟೊಕೋಲ್ ಎಂಜಿನಿಯರಿಂಗ್ ಸರ್ವೀಸಸ್ ನಿರ್ಮಿಸಿರುವ ಲಘು ಯುದ್ಧ ವಿಮಾನ ‘ತೇಜಸ್ ಎಂ.ಕೆ1ಎ’ನ ಮೊದಲ ಹಿಂಬದಿ ಚೌಕಟ್ಟನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ನಗರದ ಎಚ್‌ಎಎಲ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಆಗಲಿದೆ. ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಮೂಲಕ ಆತ್ಮನಿರ್ಭರ ಭಾರತ ನಿರ್ಮಿಸಬೇಕು ಎನ್ನುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳು ಮಹತ್ವದ ಪಾತ್ರ ವಹಿಸುತ್ತವೆ. ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಸಹಭಾಗಿತ್ವದ ಮೂಲಕ ಖಾಸಗಿ ವಲಯಕ್ಕೆ ಹೊಸ ಅವಕಾಶಗಳನ್ನು ಎಚ್‌ಎಎಲ್ ಸೃಷ್ಟಿಸುತ್ತಿದೆ ಎಂದರು.
ವಿಮಾನದ ಮುಖ್ಯ ಚೌಕಟ್ಟು ವಿಮಾನದ ಮುಖ್ಯ ಅಂಗ ಭಾಗವಾಗಿದ್ದು, ಅದರಲ್ಲಿ ಪೈಲಟ್, ಪ್ಯಾಸೆಂಜರ್ ಮತ್ತು ಸರಕುಗಳನ್ನು ಇರಿಸಲಾಗುತ್ತದೆ. ಖಾಸಗಿ ಕಂಪನಿ ನಿರ್ಮಿಸಿಕೊಟ್ಟಿರುವ ಹಿಂಬದಿ ಚೌಕಟ್ಟು ವಿಮಾನದ ಬಾಲ ಭಾಗ ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ಹೊಂದಿರುತ್ತದೆ.
ಒಟ್ಟು 83 ತೇಜಸ್ ಎಂ.ಕೆ.1ಎ ವಿಮಾನಗಳನ್ನು ಉತ್ಪಾದಿಸುತ್ತಿರುವ ಎಚ್‌ಎಎಲ್, ವಿವಿಧ ಬಿಡಿಭಾಗಗಳನ್ನು ನಿರ್ಮಿಸಿಕೊಡುವಂತೆ ಎಲ್ ಆ್ಯಂಡ್ ಟಿ, ಅಲ್ಫಾ ಟೊಕೋಲ್, ಟಾಟಾ, ವಿಇಎಂ ಟೆಕ್ನಾಲಜೀಸ್ ಮತ್ತು ಲಕ್ಷ್ಮೀ ಮಿಷನ್ ವರ್ಕ್ಸ್ ಕಂಪನಿಗಳಿಗೆ ಆರ್ಡರ್ ನೀಡಿದೆ.
ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್, ಎಚ್‌ಎಎಲ್ ಸಿಎಂಡಿ ಡಾ.ಡಿ.ಕೆ.ಸುನೀಲ್, ಅಲ್ಫಾ ಟೊಕೋಲ್ ಕಂಪನಿಯ ನಿರ್ದೇಶಕ ನಿವೃತ್ತ ವಿಂಗ್ ಕಮಾಂಡರ್ ಬರೇನ್ ಸೇನ್ ಉಪಸ್ಥಿತರಿದ್ದರು.