ಸಾರಾಂಶ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) 2.2 ಲಕ್ಷ ಕೋಟಿ ಮೌಲ್ಯದ ಉತ್ಪಾದನಾ ಆದೇಶಗಳನ್ನು ಹೊಂದಿದ್ದು, ಈಗಾಗಲೇ 1.2 ಲಕ್ಷ ಕೋಟಿ ಮೌಲ್ಯದ ಖರೀದಿ ಒಪ್ಪಂದಗಳ ಅಗತ್ಯಕ್ಕಾಗಿ ಲಘು ಯುದ್ದ ವಿಮಾನ, ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಎಂಜಿನ್ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಡಾ.ಡಿ.ಕೆ. ಸುನಿಲ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) 2.2 ಲಕ್ಷ ಕೋಟಿ ಮೌಲ್ಯದ ಉತ್ಪಾದನಾ ಆದೇಶಗಳನ್ನು ಹೊಂದಿದ್ದು, ಈಗಾಗಲೇ 1.2 ಲಕ್ಷ ಕೋಟಿ ಮೌಲ್ಯದ ಖರೀದಿ ಒಪ್ಪಂದಗಳ ಅಗತ್ಯಕ್ಕಾಗಿ ಲಘು ಯುದ್ದ ವಿಮಾನ, ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಎಂಜಿನ್ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ ಎಂದು ಎಚ್‌ಎಎಲ್ ಅಧ್ಯಕ್ಷ ಡಾ.ಡಿ.ಕೆ. ಸುನಿಲ್ ಹೇಳಿದ್ದಾರೆ.ಮುಂದಿನ ವರ್ಷದ ವೇಳೆಗೆ ಮತ್ತೊಂದು ಲಕ್ಷ ಕೊಟಿ ರು. ಮೌಲ್ಯದ ಖರೀದಿ ಆದೇಶಗಳು ಬರಲಿವೆ. ಸುಖೋಯ್‌ಗಾಗಿ 240 ಎಂಜಿನ್, ಎಲ್‌ಸಿಎ ತೇಜಸ್‌ನ 83 ಲಘು ಯುದ್ದ ವಿಮಾನ, ಎಲ್‌ಯುಎಚ್ ಹೆಲಿಕಾಪ್ಟರ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಂದ ಆಗಿದೆ.
2030ರವರೆಗೆ ಉತ್ಪಾದನೆಗೆ ಅಗತ್ಯವಿರುವ ಖರೀದಿ ಒಪ್ಪಂದಗಳು ಈಗಾಗಲೇ ಆಗಿವೆ. ಎಚ್‌ಎಎಲ್ ಆದಾಯವನ್ನು ಮತ್ತಷ್ಟು ಹೆಚ್ಚಳ ಮಾಡಲು ವಿದೇಶಗಳಿಗೆ ರಫ್ತು ಆದೇಶಗಳನ್ನು ತರಲೂ ಕೆಲಸ ಮಾಡುತ್ತಿದ್ದು, ವಿದೇಶಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.ಯಲಹಂಕ ವಾಯುನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಹಣಕಾಸು ವರ್ಷದಲ್ಲಿ 30,380 ಕೋಟಿ ರು. ಆದಾಯ ಗಳಿಸಿದ ದೇಶದ ಮೊದಲ ರಕ್ಷಣಾ ವಲಯದ ಸಾರ್ವಜನಿಕ ಸ್ವಾಮ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಚ್‌ಎಎಲ್ ಪಾತ್ರವಾಗಿದೆ. ಸಂಸ್ಥೆಯ ಬಳಿ ಸದ್ಯ 1.2 ಲಕ್ಷ ಕೋಟಿ ರೂ.ಗಳ ಖರೀದಿ ಒಪ್ಪಂದವಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕಾಂಬ್ಯಾಟ್ ಏರ್‌ಕ್ರಾಫ್ಟ್ ಕಡೆಗೆ ಹೆಚ್ಚು ಒಲವು ನೀಡಲಿದೆ ಎಂದು ಹೇಳಿದರು.
ಬೆಂಗಳೂರು ಮತ್ತು ನಾಸಿಕ್‌ನಲ್ಲಿರುವ ಸಂಸ್ಥೆಯ ಘಟಕಗಳಲ್ಲಿ ಎಲ್‌ಸಿಎ ಸಂಯೋಜನೆ ನಡೆಯುತ್ತಿದ್ದು, 24 ಎಲ್‌ಸಿಎ ಉತ್ಪಾದಿಸಲಾಗುತ್ತಿದೆ. ಈ ವರ್ಷ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಯೋಜಿಸಲಾಗಿದೆ ಎಂದರು.ವಿದೇಶಕ್ಕೆ ರಫ್ತು ಮಾತುಕತೆ:
ವಿದೇಶಕ್ಕೆ ರಫ್ತಿಗೆ ಆದ್ಯತೆ ನೀಡಲಾಗುತ್ತಿದ್ದು, ಗಯಾನ ದೇಶಕ್ಕೆ ಎರಡು ಡಾರ್ನಿಯರ್ ವಿಮಾನಗಳನ್ನು ನೀಡಿದ್ದೇವೆ. ನೈಜೀರಿಯಾ, ಮೊರಾಕ್ಕೊ ಮತ್ತು ಈಜಿಪ್ಟ್ ದೇಶಗಳೊಂದಿಗೆ ವಹಿವಾಟು ಮಾತುಕತೆ ನಡೆದಿದೆ. ಇನ್ನು ವಿದೇಶಗಳಲ್ಲಿ ವ್ಯಾಪಾರ ವಹಿವಾಟು ವೃದ್ಧಿಸಲು, ನಾಲ್ಕೈದು ದೇಶಗಳಲ್ಲಿ ಕಚೇರಿಗಳನ್ನೂ ತೆರೆಯಲಾಗುತ್ತದೆ ಎಂದು ವಿವರಿಸಿದರು.ತೇಜಸ್ ವಿಮಾನ ಶೀಘ್ರ ಹಸ್ತಾಂತರ:
ತೇಜಸ್ ವಿಮಾನಗಳ ಪೂರೈಕೆ ವಿಳಂಬಕ್ಕೆ ವಾಯುಸೇನೆ ಮುಖ್ಯಸ್ಥರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, 2025ರ ಅಂತ್ಯಕ್ಕೆಹನ್ನೊಂದು ತೇಜಸ್ ಎಂಕೆ-1ಎ ವಿಮಾನಗಳನ್ನು ಭಾರತೀಯ ವಾಯುಸೇನೆಗೆ ಹಸ್ತಾಂತರಿಸಲಾಗುವುದು. ಈ ಪೈಕಿ ಮೂರು ವಿಮಾನಗಳು ಏರೋ ಇಂಡಿಯಾದಲ್ಲಿ ಪ್ರದರ್ಶನ ನೀಡುತ್ತಿವೆ. ಜನರಲ್ ಎಲೆಕ್ಟ್ರಿಕ್ ತನ್ನ ಇಂಜಿನ್‌ಗಳನ್ನು ನೀಡಲು ವಿಳಂಬ ಮಾಡಿದ್ದರಿಂದ ಯೋಜನೆ ತಡವಾಯಿತು. ಈಗ ಪೂರೈಕೆ ಸರಪಣಿ ಸರಿ ದಾರಿಗೆ ಬಂದಿದ್ದು, ಮುಂದೆ ಇಂತಹ ಲೋಪಗಳು ಆಗುವುದಿಲ್ಲ ಎಂದು ಭರವಸೆ ನೀಡಿದರು.ಎಚ್‌ಎಎಲ್ ಷೇರು ಟ್ರೇಡಿಂಗ್‌ಗಾಗಿ ಅಲ್ಲ: ಎಚ್ಎಎಲ್
ಷೇರು ಮಾರುಕಟ್ಟೆಯಲ್ಲಿ ಎಚ್‌ಎಎಲ್ ಷೇರು ಮೌಲ್ಯ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌ಎಎಲ್ ಮುಖ್ಯ ಹಣಕಾಸು ಅಧಿಕಾರಿ ಬರೆನ್ಯಾ ಸೇನಾಪತಿ, 3 ಲಕ್ಷ ಕೋಟಿಯಷ್ಟಿ ಎಚ್‌ಎಎಲ್ ಬಂಡವಾಳ 2.5 ಲಕ್ಷ ಕೋಟಿಗೆ ಕುಸಿದಿದೆ. ಜಾಗತಿಕವಾಗಿ ಮಾರುಕಟ್ಟೆ ಕುಸಿತದಿಂದ ಉಂಟಾಗಿರುವ ಪರಿಣಾಮವಿದು. ಎಚ್ಎಎಲ್ ಷೇರು ಟ್ರೇಡಿಂಗ್ ಮಾಡುವ ಸಲುವಾಗಿ ಅಲ್ಲ. ಬದಲಿಗೆ ದೀರ್ಘಾವಧಿ ಹೂಡಿಕೆಗೆ ಎಚ್‌ಎಎಲ್ ಉತ್ತಮ ಆಯ್ಕೆ. ಮುಂದೆ ಖಂಡಿತ ಲಾಭಕ್ಕೆ ಮರಳಲಿದೆ ಎಂದು ಸಲಹೆ ನೀಡಿದರು.