ಸಾರಾಂಶ
ತುರ್ತು ವಾಹನ ಸಿಗದೇ ಹೆರಿಗೆ ನೋವಿನಿಂದ ಪರದಾಡಿದ ಗರ್ಭಿಣಿ ಮಹಿಳೆಯ ನೆರವಿಗೆ ಧಾವಿಸಿದ ಸಾಮಾಜಿಕ ಕಾರ್ಯಕರ್ತನ ವಾಹನದಲ್ಲೇ ಹೆರಿಗೆಯಾದ ಘಟನೆ ಸೋಮವಾರ ಹನೂರು ತಾಲೂಕಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹನೂರು
ತುರ್ತು ವಾಹನ ಸಿಗದೇ ಹೆರಿಗೆ ನೋವಿನಿಂದ ಪರದಾಡಿದ ಗರ್ಭಿಣಿ ಮಹಿಳೆಯ ನೆರವಿಗೆ ಧಾವಿಸಿದ ಸಾಮಾಜಿಕ ಕಾರ್ಯಕರ್ತನ ವಾಹನದಲ್ಲೇ ಹೆರಿಗೆಯಾದ ಘಟನೆ ಸೋಮವಾರ ಹನೂರು ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ರಾಮೇಗೌಡನಹಳ್ಳಿ ಗ್ರಾಮದ ಗರ್ಭಿಣಿ ಮಹಿಳೆ ಜಡೆಸಿದ್ದಮ್ಮ ಮೂರನೇ ಹೆರಿಗೆಗೆ ನೋವು ಕಾಣಿಸಿಕೊಂಡು ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ಸಮಯಕ್ಕೆ ಬಾರದ ತುರ್ತುವಾಹನದಿಂದ ಗರ್ಭಿಣಿ ಮಹಿಳೆ ತೊಂದರೆಗೆ ಸಿಲುಕಿದ್ದಾರೆ.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಜೀವಿ ರಾಜು ವಿಚಾರ ತಿಳಿದು ತಕ್ಷಣ ತಮ್ಮ ಸ್ವಂತ ವಾಹನದಲ್ಲಿ ಗರ್ಭಿಣಿ ಮಹಿಳೆಯನ್ನು ಆಶಾ ಕಾರ್ಯಕರ್ತರ ಜೊತೆಯಲ್ಲಿ ಕೌದಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸಮೀಪದಲ್ಲಿದ್ದ ಪೊನ್ನಾಚಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ತಾಲೂಕಿನ ಕೌದಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಸಕಾಲದಲ್ಲಿ ತುರ್ತು ವಾಹನ ಮತ್ತು ಸಿಬ್ಬಂದಿ ಸಿಗದೇ ಗುಡ್ಡಗಾಡು ಪ್ರದೇಶದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಗಮನ ಹರಿಸಿ ಸೂಕ್ತ ಆರೋಗ್ಯ ಸೇವೆ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಗರ್ಭಿಣಿ ಮಹಿಳೆಗೆ ನೆರವಾದ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ಸ್ನೇಹಜೀವಿ ರಾಜು ಒತ್ತಾಯಿಸಿದ್ದಾರೆ.
ಗುಡ್ಡಗಾಡು ಪ್ರದೇಶದ ಸಾರ್ವಜನಿಕರು ತುರ್ತು ವಾಹನಗಳು ಸಿಗದಿದ್ದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸಿಬ್ಬಂದಿಗೆ ಮಾಹಿತಿ ನೀಡಿದರೆ ತಕ್ಷಣ ಹಿರಿಯ ಅಧಿಕಾರಿಗಳಿಗೆ ತಿಳಿಸುವ ಮೂಲಕ ವಾಹನದ ವ್ಯವಸ್ಥೆ ಕಲ್ಪಿಸುತ್ತಾರೆ. ಈ ಸಂದರ್ಭದಲ್ಲಿ ಯಾರು ಧೃತಿಗೆಡದೆ ತಾಲೂಕು ವೈದ್ಯಾಧಿಕಾರಿಗೆ ಮಾಹಿತಿ ತಿಳಿಸಿದರೆ ತಕ್ಷಣ ಬದಲಿ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು. -ಪ್ರಕಾಶ್, ತಾಲೂಕು ವೈದ್ಯಾಧಿಕಾರಿ.