ಮೈಷುಗರ್‌ ಪ್ರೌಢಶಾಲೆ ಖಾಸಗೀಕರಣ ಅನಿವಾರ್ಯ: ಸಿ.ಡಿ.ಗಂಗಾಧರ್‌

| Published : Jun 29 2025, 01:32 AM IST

ಮೈಷುಗರ್‌ ಪ್ರೌಢಶಾಲೆ ಖಾಸಗೀಕರಣ ಅನಿವಾರ್ಯ: ಸಿ.ಡಿ.ಗಂಗಾಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೈಷುಗರ್ ಪ್ರೌಢಶಾಲೆಯನ್ನು ಮುನ್ನಡೆಸಲು ಕೊಡಿಯಾಲ ವಿನಾಯಕ ಮತ್ತು ವರದಾ ಕೈಗಾರಿಕಾ ತರಬೇತಿ ಸಂಸ್ಥೆ, ಬಸರಾಳಿನ ಪಾಂಚಜನ್ಯ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರಿನ ಕೀರ್ತನಾ ಟ್ರಸ್ಟ್ ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಈ ಮೂರು ವಿದ್ಯಾಸಂಸ್ಥೆಗಳಲ್ಲಿ ೨೦ ವರ್ಷಗಳ ಅನುಭವವನ್ನು ಪೂರ್ಣಗೊಳಿಸಿರುವ ಮದ್ದೂರು ತಾಲೂಕು ಹೊನ್ನಲಗೆರೆಯ ಕೀರ್ತನಾ ಟ್ರಸ್ಟ್ ಇವರಿಗೆ ನೀಡಲು ಕ್ರಮ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಸನ್ನಿವೇಶದಲ್ಲಿ ಮೈಷುಗರ್ ಪ್ರೌಢ ಶಾಲೆಯನ್ನು ಕಂಪನಿ ವತಿಯಿಂದ ಮುನ್ನಡೆಸಲು ಸಾಧ್ಯವಿಲ್ಲದಿರುವುದರಿಂದ ಖಾಸಗೀಕರಣಗೊಳಿಸುವುದು ಅನಿವಾರ್ಯ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸ್ಪಷ್ಟಪಡಿಸಿದರು.

ಶಾಲೆಯ ಸಿಬ್ಬಂದಿಗೆ ೬ ತಿಂಗಳಿಂದ ಸಂಬಳ ಕೊಟ್ಟಿಲ್ಲ. ೧೮ ಲಕ್ಷ ರು. ಹಣವನ್ನು ಭರಿಸಬೇಕಿದೆ. ಇನ್ನೊಂದೆಡೆ ಹಾಜರಾತಿ ಕೊರತೆಯಿಂದ ಶಾಲೆಯನ್ನು ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಹಾಜರಾತಿ ಉತ್ತಮ ಪಡಿಸಿಕೊಳ್ಳದಿದ್ದರೆ ಆಗಸ್ಟ್ ತಿಂಗಳಿಂದ ವೇತನವನ್ನು ತಡೆಹಿಡಿಯುವುದಾಗಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನಡೆಸಲು ಟೆಂಡರ್ ಕರೆಯಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಷುಗರ್ ಪ್ರೌಢಶಾಲೆಯನ್ನು ಮುನ್ನಡೆಸಲು ಕೊಡಿಯಾಲ ವಿನಾಯಕ ಮತ್ತು ವರದಾ ಕೈಗಾರಿಕಾ ತರಬೇತಿ ಸಂಸ್ಥೆ, ಬಸರಾಳಿನ ಪಾಂಚಜನ್ಯ ಎಜುಕೇಷನ್ ಟ್ರಸ್ಟ್ ಹಾಗೂ ಮದ್ದೂರಿನ ಕೀರ್ತನಾ ಟ್ರಸ್ಟ್ ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಈ ಮೂರು ವಿದ್ಯಾಸಂಸ್ಥೆಗಳಲ್ಲಿ ೨೦ ವರ್ಷಗಳ ಅನುಭವವನ್ನು ಪೂರ್ಣಗೊಳಿಸಿರುವ ಮದ್ದೂರು ತಾಲೂಕು ಹೊನ್ನಲಗೆರೆಯ ಕೀರ್ತನಾ ಟ್ರಸ್ಟ್ ಇವರಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದರು.

ಶಿಕ್ಷಣ ಸಂಸ್ಥೆ ನಡೆಸಿರುವ ಅನುಭವವಿಲ್ಲದ ನಾವು ಶಿಕ್ಷಣ ತಜ್ಞರಾದ ಲಿಂಗಣ್ಣ ಬಂಧೂಕಾರ್, ಎಚ್.ಎನ್.ಶಿವಣ್ಣಗೌಡ, ತೂಬಿನಕೆರೆ ಲಿಂಗರಾಜು, ಎಸ್.ಬಿ.ಶಂಕರೇಗೌಡ ಅವರೆಲ್ಲರ ಸಭೆ ಕರೆದು ಚರ್ಚಿಸಿದಾಗ ಮೈಷುಗರ್ ಪ್ರೌಢಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಅವರೂ ವ್ಯಕ್ತಪಡಿಸಿದ್ದಾರೆ ಎಂದರು.

ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನಿಂದ ಯಾವ ಬಾಕಿಯನ್ನೂ ಉಳಿಸಿಕೊಂಡಿಲ್ಲ. ಎಲ್ಲಾ ಹಣವನ್ನು ಪ್ರೌಢಶಾಲೆಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಸಭೆ ಕರೆಯಲಾಗುವುದು. ಶಾಲೆಗೆ ಟ್ರಸ್ಟ್‌ನಿಂದ ಹಣ ಬಿಡುಗಡೆಗೊಳಿಸದಂತೆ ತೀರ್ಮಾನ ಕೈಗೊಳ್ಳಲು ಚಿಂತನೆ ನಡೆಸಿರುವುದಾಗಿ ಹೇಳಿದರು.

ಹನಕೆರೆ ಸಮುದಾಯ ಭವನ, ಮೈಷುಗರ್ ಕಲ್ಯಾಣಮಂಟಪ, ಎಸ್.ಐ.ಕೋಡಿಹಳ್ಳಿ ಸಮುದಾಯ ಭವನಗಳಿಂದ ಪ್ರತಿ ವರ್ಷ ಒಂದು ಲಕ್ಷ ರು. ಆದಾಯ ಬರುತ್ತಿದ್ದು, ಟೆಂಡರ್ ಕರೆದ ಬಳಿಕ ೨ ರಿಂದ ೨.೦೫ ಲಕ್ಷ ರು.ವರೆಗೆ ನೀಡಲು ಗುತ್ತಿಗೆದಾರರು ಮುಂದೆ ಬಂದಿರುವುದರಿಂದ ಆದಾಯ ಮೂಲವನ್ನು ಸೃಷ್ಟಿಸಿಕೊಳ್ಳಲಾಗುತ್ತಿದೆ ಎಂದು ನುಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ರಾಜಕೀಯ ನಿರುದ್ಯೋಗಿಗಳಾಗಿರುವ ಅವರು ಜವಾಬ್ದಾರಿಯುತವಾಗಿ ನಿರ್ವಹಿಸಿದ ವಿದ್ಯಾ ಸಂಸ್ಥೆಗಳನ್ನು ಮುಚ್ಚುವುದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಕ್ರಿಕೆಟ್ ಅಕಾಡೆಮಿಗೆ ಮೈಷುಗರ್ ಆವರಣವನ್ನು ೫೦ ಸಾವಿರ ರು.ಗಳಿಗೆ ಗುತ್ತಿಗೆ ನೀಡಿರುವುದು ಸತ್ಯ. ಇದರಲ್ಲಿ ಯಾವ ಲೋಪವಾಗಿಲ್ಲ. ಅಕಾಡೆಮಿಗೆ ೨೫ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಪ್ರತಿ ವಿದ್ಯಾರ್ಥಿಗೆ ೧ ಸಾವಿರ ರು. ಪಡೆಯುತ್ತಿದ್ದಾರೆ ಎಂದರು.

ಸಾರ್ವಜನಿಕ ಜೀವನದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಶೈಕ್ಷಣಿಕ ಸಂಸ್ಥೆಯಿಂದ ವೇತನ ಪಡೆದಿರುವ ಆರೋಪಕ್ಕೆ ಒಳಗಾಗಿರುವ ಕೆ.ಟಿ.ಶ್ರೀಕಂಠೇಗೌಡರಿಂದ ಯಾವುದೇ ಪಾಠ ಕಲಿಯಬೇಕಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವ ಹಾಗೂ ಸಕ್ಕರೆ ಕಾಖಾರ್ಖನೆಯನ್ನು ಮುಚ್ಚಲು ಹೊರಟವರಿಂದ ಪಾಠ ಕಲಿಯಲೂ ಬೇಕಿಲ್ಲ ಎಂದು ನುಡಿದರು.

ಗೋಷ್ಠಿಯಲ್ಲಿ ಸುಂಡಹಳ್ಳಿ ಮಂಜುನಾಥ, ವಿಜಯಕುಮಾರ್, ಸಿ.ಎಂ.ದ್ಯಾವಪ್ಪ, ಚಂದಶೇಖರ್, ಬೆಟ್ಟೇಗೌಡ, ಮೋಹನ್‌ಕುಮಾರ್ ಇತರರಿದ್ದರು.