ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನೆ ಬಾಗಿಲಿಗೇ ಸವಲತ್ತುಗಳು: ಶಾಸಕ ಶರತ್ ಬಚ್ಚೇಗೌಡ

| Published : Feb 11 2025, 12:47 AM IST

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನೆ ಬಾಗಿಲಿಗೇ ಸವಲತ್ತುಗಳು: ಶಾಸಕ ಶರತ್ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ಪೋಸಿಸ್ ಸಂಸ್ಥೆ ವತಿಯಿಂದ ತಾಲೂಕಿನ 29 ಗ್ರಾಮಗಳಲ್ಲಿ 29 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ 40 ಕೋಟಿ ಹಣ ನೀಡುವುದಾಗಿ ಸಂಸ್ಥೆ ತಿಳಿಸಿದ್ದು, ಆದಷ್ಟು ಬೇಗ ಸರ್ಕಾರಿ ಶಾಲೆಗಳ ಕಾಯಕಲ್ಪವಾಗಲಿದೆ, ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ತಾಲೂಕಿನಲ್ಲಿ ಸೃಷ್ಟಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದು, ಚಿಕ್ಕನಹಳ್ಳಿ ಸೇರಿ ಅಕ್ಕ-ಪಕ್ಕದ ಮೂರು ಗ್ರಾಮಗಳ ಒಟ್ಟು 51 ಫಲಾನುಭವಿಗಳಿಗೆ ಇ- ಖಾತೆಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ಇ- ಖಾತೆ ವಿತರಿಸಿ ಮಾತನಾಡಿದರು.

ಮುಗಬಾಳ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ೧೫ ಲಕ್ಷ ರು. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ, 15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮಾಡಲಾಗಿದ್ದು, ಹಲವಾರು ವರ್ಷಗಳಿಂದ ದಾಖಲೆ ಸಮಸ್ಯೆಯಲ್ಲಿದ್ದ ಫಲಾನುಭವಿಗಳಿಗೆ ಇ- ಖಾತೆಗಳನ್ನು ವಿತರಣೆ ಮಾಡಲಾಗುತ್ತಿದೆ, ಸರ್ಕಾರದಿಂದ ಕಳೆದ ಒಂದು ವರ್ಷದಲ್ಲಿ 259 ಕೋಟಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ವಿತರಣೆ ಮಾಡುವ ಮೂಲಕ ಪಾರದರ್ಶಕ ಆಡಳಿತವನ್ನು ನೀಡುತ್ತಿದ್ದು, ಸರ್ಕಾರದ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ನಿರಂತರ ಮಾಡುತ್ತಾ ಬಂದಿದ್ದಾರೆ, ಈಗಾಗಲೇ ತಾಲೂಕಿನ ಕೆರೆಗಳನ್ನು ತುಂಬಿಸಲು 150 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿಯಾಗಿದ್ದು, ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ, ಅತ್ಯುತ್ತಮ ದರ್ಜೆಯ ಎಪಿಎಂಸಿ ನಿರ್ಮಾಣವಾಗುತ್ತಿದೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಜಡಿಗೇನಹಳ್ಳಿಗೆ ತರಲಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ, 14 ನೂತನ ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಕೆಸಿ ವ್ಯಾಲಿ ಮೂಲಕ ಈ ಬಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ರೈತರಿಗೆ ಸಹಕಾರಿಯಾಗಲಿದೆ ಎಂದರು.

ಇನ್ಪೋಸಿಸ್ ಸಂಸ್ಥೆ ವತಿಯಿಂದ ತಾಲೂಕಿನ 29 ಗ್ರಾಮಗಳಲ್ಲಿ 29 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈಗಾಗಲೇ 40 ಕೋಟಿ ಹಣ ನೀಡುವುದಾಗಿ ಸಂಸ್ಥೆ ತಿಳಿಸಿದ್ದು, ಆದಷ್ಟು ಬೇಗ ಸರ್ಕಾರಿ ಶಾಲೆಗಳ ಕಾಯಕಲ್ಪವಾಗಲಿದೆ, ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ತಾಲೂಕಿನಲ್ಲಿ ಸೃಷ್ಟಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಇಒ ಡಾ.ಸಿ.ಎನ್ ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗ್ಯ ನಾಗರಾಜ್, ಸದಸ್ಯೆ ಶೋಭಾ ಪ್ರಕಾಶ್, ಸಿಡಿಪಿಒ ಶಿವಮ್ಮ, ಪಿಡಿಒ ಲೋಕೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪರಮೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಉಪಾಧ್ಯಕ್ಷ ಗುರುಬಸವಣ್ಣ, ಮುಖಂಡರಾದ ಕೋಡಿಹಳ್ಳಿ ಸುರೇಶ್, ರಾಜಶೇಖರಗೌಡ ಸೇರಿ ಹಲವಾರು ಮುಖಂಡರು ಹಾಜರಿದ್ದರು.