ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಡಾ.ಎನ್.ಎಸ್.ಇಂದ್ರೇಶ್

| Published : May 24 2025, 12:23 AM IST

ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಡಾ.ಎನ್.ಎಸ್.ಇಂದ್ರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದರು ಎಂಬ ಕಾರಣಕ್ಕೆ ದೊಡ್ಡ ಹೈಡ್ರಾಮಾ ಮಾಡಿದ್ದ ಕಾಂಗ್ರೆಸ್ಸಿಗರು, ಈಗ ಅದೇ ಗೂಂಡಾಗಳು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ದ್ರೋಹವಲ್ಲವೇ

ಕನ್ನಡಪ್ರಭ ವಾರ್ತೆ ಮಂಡ್ಯ

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಕಲುಬುರಗಿಯ ಚಿತ್ತಾಪುರದ ಅತಿಥಿಗೃಹದಲ್ಲಿ ದಿಗ್ಭಂಧನದಲ್ಲಿಟ್ಟು, ಅವರ ಕಾರಿನ ಮೇಲೆ ಬಣ್ಣ ಎರಚುವ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ. ತಕ್ಷಣ ಸಚಿವ ಪ್ರಿಯಾಂಕ್ ಖರ್ಗೆಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಒತ್ತಾಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಅಥವಾ ರಿಪಬ್ಲಿಕ್ ಆಫ್ ಕಲುಬುರ್ಗಿ- ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆಯೋ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.

ಕಲುಬುರಗಿಯಲ್ಲಿ ನಡೆದ ಘಟನೆ ಭಯಾನಕವಾಗಿದೆ. ಪೊಲೀಸರ ನಿಷ್ಠೆ ಯಾರ ಕಡೆಗೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಸಂವಿಧಾನ ಬದ್ಧವಾಗಿ ಕಾನೂನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆದೇಶವನ್ನು ಅವರ ಎಜೆಂಟರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ದೂರಿದರು.

ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಿದ್ದರ ಪರಿಣಾಮ, ಕೆಐಎಡಿಬಿಯು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದ ಐದು ಎಕರೆ ಭೂಮಿಯನ್ನು ಹಿಂದಿರುಗಿಸಬೇಕಾಯಿತು. ಅಕ್ರಮ ಆಸ್ತಿಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದಕ್ಕಾಗಿ, ಆಸ್ತಿ ಹಿಂದಿರುಗಿಸಬೇಕಾದ ಸ್ಥಿತಿ ಉಂಟಾಗಿತ್ತು. ಇದರ ಸೇಡಿನಿಂದ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರಿಂದ ಛಲವಾದಿ ನಾರಾಯಣಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವ ಯತ್ನ ನಡೆದಿದೆ ಎಂದು ಆರೋಪಿಸಿದರು.

ರಾಜೀನಾಮೆ ನೀಡುವವರೆಗೂ ಹೋರಾಟ:

ಕಲುಬುರುಗಿಯಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಆಡಳಿತ ಯಂತ್ರ ದುರ್ಬಳಕೆ ಮಾಡಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ನಾಯಕರ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕು. ಇಲ್ಲದಿದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ ಮಾತನಾಡಿ, ಮಡಿಕೇರಿಯಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದರು ಎಂಬ ಕಾರಣಕ್ಕೆ ದೊಡ್ಡ ಹೈಡ್ರಾಮಾ ಮಾಡಿದ್ದ ಕಾಂಗ್ರೆಸ್ಸಿಗರು, ಈಗ ಅದೇ ಗೂಂಡಾಗಳು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಜಿಲ್ಲಾ ಪೊಲೀಸ್ ಅಧೀಕ್ಷಕರು, ಎಡಿಜಿಪಿ ಅವರಿಗೂ ಮನವಿ ಮಾಡಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದೆವು. ಆದರೆ ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಅವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು, ನಮ್ಮ ನಾಯಕರ ವಿರುದ್ಧ ಹಗುರವಾಗಿ ಮಾತನಾಡುತ್ತಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ಜಿಲ್ಲಾಧ್ಯಕ್ಷ ಶಂಕರ್, ಕೆಂಪಬೋರಯ್ಯ, ನಿತ್ಯಾನಂದ, ಯೋಗೇಶ್, ಧರಣಿ, ಸಿ.ಟಿ.ಮಂಜುನಾಥ್ ಗೋಷ್ಠಿಯಲ್ಲಿದ್ದರು.