ಸಾರಾಂಶ
ಗದಗ: ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯ ವೇಳೆ ಕಾಂಗ್ರೆಸ್ ಗೂಂಡಾಗಳು ಗಲಾಟೆ ಮಾಡಿದ್ದನ್ನು ಖಂಡಿಸಿ ಮೇ 4 ರಂದು ನಗರಕ್ಕೆ ಆಗಮಿಸುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಜಿಲ್ಲಾ ಜೆಡಿಎಸ್ ನಿಂದ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಗೂಂಡಾಗಿರಿಯನ್ನು ನಾವು ಸಹಿಸುವುದಿಲ್ಲ. ರಾಮನಗರದ ಕಾಂಗ್ರೆಸ್ ಶಾಸಕರ ಅಶ್ಲೀಲ ವಿಡಿಯೋ ಈಗಾಗಲೇ ರಾಜ್ಯಾದ್ಯಂತ ಓಡಾಡುತ್ತಿದ್ದು, ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ. ಅವಳಿ ನಗರದಲ್ಲಿ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು, ಹಿಂದೆ ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ರಾಸಲೀಲೆ ಪ್ರಕರಣದಲ್ಲಿ ಸಿಲುಕಿದ್ದರು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಯಾಕೆ ಮಾತನಾಡಲಿಲ್ಲ. ಪ್ರಜ್ವಲ್ ರೇವಣ್ಣನವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 2 ರಿಂದ 3 ಸಾವಿರ ಮಹಿಳೆಯರ ಅಶ್ಲೀಲ ವಿಡಿಯೊಗಳನ್ನು ಕಾಂಗ್ರೆಸ್ ನವರೇ ಹಂಚಿದ್ದಾರೆ. ಅವರ ಗೌರವದ ಪ್ರಶ್ನೆ ಏನು, ಆ ಮಹಿಳೆಯರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸರಾಯಿ ಹಾಗೂ ಲಾಟರಿ ಬಂದ್ ಮಾಡಿಸಿ ಮಹಿಳೆಯರ ಹಿತ ಕಾಪಾಡಿದ್ದರು. ಈಗಿರುವ ಸರ್ಕಾರ ಸರಾಯಿ ಕುಡಿಸಿ ಜನರನ್ನು ಹಾಳು ಮಾಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮಿತ್ರ ಪಕ್ಷದವರ ಒಪ್ಪಿಗೆ ಇಲ್ಲ. ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಆದರೆ, ದೇಶಾದ್ಯಂತ ಕೇವಲ 230 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದೆ. ಅದರಲ್ಲಿ ಈಗಾಗಲೇ ಎರಡು ಸ್ಥಾನ ಕಳೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪರ್ವತಗೌಡ್ರ, ಪ್ರಫುಲ್ ಪುಣೇಕರ್, ಜೋಸೆಪ್ ಉದೋಜಿ, ಜಿ.ಕೆ. ಕೋಳ್ಳಿಮಠ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.ಪಕ್ಷದ ಸಭೆ ನಡೆದಾಗ ಗಲಾಟೆ ಮಾಡಿದ್ದು ತಪ್ಪು. ನೇಹಾ ಹಿರೇಮಠ, ಸೌಜನ್ಯ ಸೇರಿದಂತೆ ಹಲವು ಮಹಿಳೆಯರ ದೌರ್ಜನ್ಯದ ಬಗ್ಗೆ ಕಾಂಗ್ರೆಸ್ ಮಹಿಳಾ ಮುಖಂಡರು ಮಾತನಾಡುತ್ತಿಲ್ಲ. ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಬೇರೆ ಮಹಿಳೆಯರಿಗೆ ಅನ್ಯಾಯವಾದಾಗ ಬಾಯಿ ಬಿಡಲ್ಲ. ಒಬ್ಬ ಮಹಿಳೆ ಸಿಎಂ ಬಳಿ ನ್ಯಾಯ ಕೇಳಲು ಹೋದಾಗ ಎದೆ ಮೇಲೆ ಕೈ ಹಾಕಿ ವೇಲ್ ಕಿತ್ತು ಎಸೆಯುತ್ತಾರೆ. ಈ ಬಗ್ಗೆ ಕಾಂಗ್ರೆಸ್ ಮಹಿಳೆಯರು ಯಾಕೆ ಮಾತನಾಡುವುದಿಲ್ಲ. ಪ್ರಜ್ವಲ್ ಪ್ರಕರಣದ ಮಹಿಳೆಯರ ವಿಡಿಯೋ ಲೀಕ್ ಮಾಡಿ ಅವರ ಮಾನ ಹರಾಜು ಹಾಕಿದ್ದು ಇದೇ ಕಾಂಗ್ರೆಸ್. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಈ ರೀತಿ ಕುತಂತ್ರ ಮಾಡುತ್ತಿದೆ. ಜನತೆ ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮೇಟಿ ಹೇಳಿದರು.