ಒಬವ್ವ ನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಸಿಡಿಲಬ್ಬರ

| Published : Apr 24 2024, 02:17 AM IST

ಸಾರಾಂಶ

ಕೃಷಿಕರು ದೇಶದ ಪ್ರತಿಯೊಬ್ಬರ ಅನ್ನದಾತರು. ಈ ದೇಶ ರೈತರದ್ದು, ನಿಮ್ಮದು, ನಮ್ಮೆಲ್ಲರದು. ಎಲ್ಲರೂ, ಎಲ್ಲವನ್ನು ಒಳಗೊಂಡವರ ಬದುಕು ಹಸನಾಗಬೇಕು

ಕನ್ನಡಪ್ರಭವಾರ್ತೆ ಚಿತ್ರದುರ್ಗಒನಕೆ ಓಬವ್ವಳ ನಾಡು ಚಿತ್ರದುರ್ಗ ಮಂಗಳವಾರ ಅಕ್ಷರಶಃ ಮಹಿಳೆಯರಿಂದ ತುಂಬಿ ತುಳುಕಾಡಿತು. ಲೋಕಸಭೆ ಚುನಾವಣೆ ಹಿನ್ನೆಲೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಕರೆಯಿಸಿ ಪ್ರಚಾರ ಸಭೆ ಕೈಗೊಂಡಿದ್ದ ಕಾಂಗ್ರೆಸ್ ಇದಕ್ಕಾಗಿ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸಿ ಕರೆ ತಂದಿತ್ತು. ಗ್ಯಾರಂಟಿ ಯೋಜನೆಗಳ ಪ್ರತಿಧ್ವನಿಯ ಸಂಕೇತವಾಗಿ ಸಮಾವೇಶವ ಬಿಂಬಿಸಲಾಗಿತ್ತಾದರೂ ಪ್ರಿಯಾಂಕಾ ಗಾಂಧಿ ಭಾಷಣ ಮಹಿಳೆಯರ ಮನದಲ್ಲಿ ಇಂದಿರಾಗಾಂಧಿ ನೆನಪು ಮಾಡಿಸಿತು. ಸಮಾವೇಶಕ್ಕೆ ಬಂದಿದ್ದ ಮಹಿಳೆಯಯರು ಇಂದಿರಾ ಗಾಂಧಿಯ ನೋಡಿಲ್ಲದೇ ಇರಬಹುದು. ಆದರೆ ಇಂದಿರಾಗಾಂಧಿ ಹೀಗೆ ಮಾತನಾಡ್ತಾ ಇದ್ದರಂತೆ, ಈಕೆಯೂ ಭಾರೀ ಗಟ್ಟಿಗಿತ್ತಿ ಮಹಿಳೆ ಎಂಬ ಉದ್ಗಾರಗಳು ಸಮಾವೇಶದಲ್ಲಿ ಕೇಳಿ ಬಂದವು.

ನ್ಯಾಯ ಸಂಕಲ್ಪ ಯಾತ್ರೆಯಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿ ಪ್ರಿಯಾಂಕಾ ಗಾಂಧಿ, ನನ್ನ ಅಜ್ಜಿ ಇಂದಿರಾ ಮಾತಾಡಿದ ವೇದಿಕೆಯಲ್ಲೇ ನಾನು ನಿಂತಿದ್ದೇನೆ ಎಂದು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತ್ತು. ಜಮಾವಣೆಗೊಂಡಿದ್ದ ಕೃಷಿ ಕಾರ್ಮಿಕ ಮಹಿಳೆಯರ ಪ್ರಧಾನವಾಗಿರಿಸಿಕೊಂಡು ಮಾತನಾಡಿದ ಪ್ರಿಯಾಂಕಾ, ನೀವೆಲ್ಲ ಕಷ್ಟ ಜೀವಿಗಳು, ಶ್ರಮಿಕರು, ಕಾರ್ಮಿಕರು. ನಿಮ್ಮ ಕಷ್ಟ ಅರ್ಥ ಆಗುತ್ತದೆ. ನಿಮ್ಮ ಬದುಕು ಹಸನಾದರೆ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ ದೇಶ ನಿರ್ಮಾಣ ಮಾಡಿದಂತೆ ಎಂದು ಮಹಿಳೆಯರ ಮನದಾಳಕ್ಕೆ ಇಳಿದು ಆಪ್ತ ಮಾತುಗಳನ್ನಾಡಿದರು.ಕೃಷಿಕರು ದೇಶದ ಪ್ರತಿಯೊಬ್ಬರ ಅನ್ನದಾತರು. ಈ ದೇಶ ರೈತರದ್ದು, ನಿಮ್ಮದು, ನಮ್ಮೆಲ್ಲರದು. ಎಲ್ಲರೂ, ಎಲ್ಲವನ್ನು ಒಳಗೊಂಡವರ ಬದುಕು ಹಸನಾಗಬೇಕು. ಆದರೆ ದೇಶದಲ್ಲಿ ವಿರುದ್ಧವಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಇವಾವೂ ಬದುಕಿಗೆ ಪೂರಕವಾಗಿಲ್ಲ. ದೇಶದಲ್ಲಿ ಎರಡು ರೀತಿಯ ಸತ್ಯಗಳು ಇವೆ. ಒಂದು ಸತ್ಯ ಬೆಲೆ ಏರಿಕೆಯದ್ದಾದರೆ ಮತ್ತೊಂದು ನಿರುದ್ಯೋಗದ ಸಮಸ್ಯೆ. ಆದರೆ ಟಿವಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸುವ ಪರಿ, ಆಡುತ್ತಿರುವ ವೈಭೋಗದ ಮಾತು ಕೇವಲ ವಾಹಿನಗಳಲ್ಲಿ ಕಾಣುತ್ತಿರುವ ಸತ್ಯ. ಆದರೆ ದೇಶದ ವಾಸ್ತವಾಂಶ ಬೇರೆಯದೇ ಇದೆ ಎಂದು ರಾಜಕೀಯ ಮಾತುಗಳ ಹರಿಯಬಿಟ್ಟರು.

ಕಳೆದ 45ವರ್ಷದಲ್ಲಿ ಇಲ್ಲದ‌ ನಿರುದ್ಯೋಗ ಈಗ ಇದೆ. 75ಕೋಟಿ ವಿದ್ಯಾವಂತ ನಿರುದ್ಯೋಗಿಗಳು ದೇಶದಲ್ಲಿ ಇದ್ದಾರೆ. ಕೇಂದ್ರ ಸರ್ಕಾರದಲ್ಲಿ 30 ಕೋಟಿ ಕೆಲಸ ಖಾಲಿ ಇವೆ. ವರ್ಷಕ್ಕೆ ಎರಡು ಕೋಟಿ ಕೆಲಸ ಕೊಡುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದವರ ಮಾತುಗಳು ಹುಸಿಯಾಗಿವೆ. ಬೆಲೆ ಏರಿಕೆ ಎಂಬುದು ದೊಡ್ಡ ಸಮಸ್ಯೆ ಸೃಷ್ಟಿಸಿದೆ. ದುಡಿಮೆ ಮತ್ತು ಖರ್ಚು ತಾಳೆಯಾಗುತ್ತಿಲ್ಲ. ಪೆಟ್ರೋಲ್ ನೂರು, ಡೀಸೆಲ್ 90 ರು. ದಾಟಿದೆ. ಚಿನ್ನ ಬೆಳ್ಳಿ ದುಬಾರಿಯಾಗಿದ್ದು ಬಡವರ ಕೈ ಎಟುಕುತ್ತಿಲ್ಲವೆಂದು ನೋವು ಹೊರ ಹಾಕಿದರು.

ಬಿಜೆಪಿ ನಾಯಕರು ಒಂದೊಂದು ರೀತಿ ಮಾತಾಡುತ್ತಿದ್ದಾರೆ. ಕೆಲವರು ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಅವರ ಹೇಳಿಕೆಗಳ ಅರ್ಥವೇನು ಎಂಬುದ ಎಲ್ರರೂ ತಿಳಿದುಕೊಳ್ಳಬೇಕು. ಸಂವಿಧಾನ ನಮ್ಮೆಲ್ಲರಿಕೆ ಪ್ರಬಲ ಹಕ್ಕುಗಳ ಕೊಟ್ಟಿದೆ. ನಮ್ಮ‌ಮತ‌ ನಮ್ಮ ಹಕ್ಕು, ನಮ್ಮ ಸಂವಿಧಾನ ನಮಗೆ ಸ್ವಾತಂತ್ರ್ಯ ನೀಡಿದೆ. ಸಂವಿಧಾನ ಬದಲಿಸುವ ಮಾತು ನಮ್ಮ ಜೀವನದ ಮೇಲೆ ಹೊಡೆತ ಕೊಡಲಿದೆ ಎಂದು ಪ್ರಿಯಾಂಕಾ ಹೇಳಿದರು.

ರೈತರಿಗೆ ಬೆಂಬಲ ಬೆಲೆ, ಕೃಷಿಗೆ ಜಿಎಸ್ಟಿ ಮುಕ್ತಗೊಳಿಸುತ್ತೇವೆ. ಭೂಮಿ‌ ಇಲ್ಲದವರಿಗೆ ಭೂಮಿ ನೀಡುವುದು, ಬೆಳೆ ನಷ್ಟವಾದವರಿಗೆ 30ದಿನದಲ್ಲಿ ವಿಮೆ ಹಣ ಕೊಡುವ ಯೋಜನೆ‌ ತರುತ್ತೇವೆ. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ರೈತರು, ಸಾಮಾನ್ಯ ಜನರ ಉಳುವಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು. ಕೋಟೆ ನಾಡಿನ ನೆನಪಿಗಾಗಿ ಪ್ರಿಯಾಂಕಾ ಗಾಂಧಿಗೆ ಬುದ್ಧ ಹಾಗೂ ಬೆಳ್ಳಿ ಖಡ್ಗ ನೀಡಿ ಗೌರವಿಸಲಾಯಿತು. ಉರಿ ಬಿಸಿಲು ಲೆಕ್ಕಿಸದೆ ಮಹಿಳೆಯರು ಸಮಾವೇಶಕ್ಕೆ ಹರಿದು ಬಂದಿದ್ದು ವಿಶೇಷವಾಗಿ ಕಂಡಿತು.ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ವೀರೇಂದ್ರ ಪಪ್ಪಿ, ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ಎ.ವಿ ಉಮಾಪತಿ, ಜಯಮ್ಮ ಬಾಲರಾಜ್, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಫೀರ್, ಕಾರ್ಯಾಧ್ಯಕ್ಷ ಹಾಲೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಮುಖಂಡರಾದ ನೇರ್ಲಗುಂಟೆ ರಾಮಪ್ಪ, ಮರುಳಾರಾದ್ಯ, ಡಿ.ಟಿ.ವೆಂಕಟೇಶ್, ಆರ್.ಕೆ.ಸರ್ದಾರ್, ಹನುಮಲಿ ಷಣ್ಮುಖಪ್ಪ ಇದ್ದರು.