ಕ್ಷೇತ್ರದಿಂದ ಆಯ್ಕೆಯಾದ 2ನೇ ಮಹಿಳೆ ಪ್ರಿಯಾಂಕಾ

| Published : Jun 05 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸೋಲಿಸುವ ಮೂಲಕ ಈ ಕ್ಷೇತ್ರದಲ್ಲಿ ಗೆದ್ದ 2ನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ, 2024ರ ಹೊಸ ಸಂಸತ್‌ ಸದಸ್ಯರ ಪೈಕಿ ಅತೀ ಕಿರಿಯ ವಯಸ್ಸಿನ ಯುವ ಸಂಸದೆ ಎಂಬ ದಾಖಲೆಗೂ ಭಾಜನವಾದರೂ ಅಚ್ಚರಿಪಡಬೇಕಿಲ್ಲ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಸೋಲಿಸುವ ಮೂಲಕ ಈ ಕ್ಷೇತ್ರದಲ್ಲಿ ಗೆದ್ದ 2ನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲ, 2024ರ ಹೊಸ ಸಂಸತ್‌ ಸದಸ್ಯರ ಪೈಕಿ ಅತೀ ಕಿರಿಯ ವಯಸ್ಸಿನ ಯುವ ಸಂಸದೆ ಎಂಬ ದಾಖಲೆಗೂ ಭಾಜನವಾದರೂ ಅಚ್ಚರಿಪಡಬೇಕಿಲ್ಲ.

ಪುರುಷರ ವಿಭಾಗದಲ್ಲಿ ಬೀದರ್‌ನಿಂದ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಸ್ಪರ್ಧೆ ಮಾಡಿದ್ದ ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ 26 ವರ್ಷದ ಯುವ ಸಂಸದರಾಗಿದ್ದಾರೆ. ಅದರಂತೆ ಮಹಿಳಾ ವಿಭಾಗದಲ್ಲಿ 27 ವರ್ಷದ ಪ್ರಿಯಾಂಕಾ ಜಾರಕಿಹೊಳಿ ಅತೀ ಕಿರಿಯ ಸಂಸದೆಯಾಗಿ ರಾಜ್ಯದಿಂದ ಆಯ್ಕೆಯಾಗಿದ್ದಾರೆ.ಈ ಹಿಂದೆ ರತ್ನಮಾಲಾ ಸವಣೂರು (1996) ಚಿಕ್ಕೋಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೊದಲ ಮಹಿಳೆ ಎಂಬ ಪಟ್ಟ ಪಡೆದುಕೊಂಡಿದ್ದರು. ಈಗ ಪ್ರಿಯಾಂಕಾ ಜಾರಕಿಹೊಳಿ ಸಂಸದೆಯಾಗಿ ಆಯ್ಕೆಯಾಗುವ ಮೂಲಕ 2ನೇ ಮಹಿಳೆಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕ್ಕೋಡಿ ಮತಕ್ಷೇತ್ರಕ್ಕೆ 2ನೇ ಮಹಿಳೆಯಾದರೇ, ಬೆಳಗಾವಿ ಜಿಲ್ಲೆಗೇ 3ನೇ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಇತಿಹಾಸ ತಿರುವಿ ಹಾಕಿದಾಗ ಎರಡೂ ಕ್ಷೇತ್ರಗಳಲ್ಲಿ ಇದುವರೆಗೆ ಒಂದೊಂದು ಬಾರಿ ಮಾತ್ರ ಮಹಿಳೆ ಆಯ್ಕೆಯಾಗಿದ್ದಳು. ಉಳಿದಂತೆ ಪುರುಷರೇ ಹೆಚ್ಚು ಆ ಸ್ಥಾನವನ್ನು ಅಲಂಕರಿಸಿದ್ದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರತ್ನಮಾಲಾ ಸವಣೂರು (1996) ಒಬ್ಬರೇ ಮಹಿಳೆ ಇದುವರೆಗೆ ಆಯ್ಕೆಯಾಗಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ದಿ.ಸುರೇಶ ಅಂಗಡಿ ಪತ್ನಿ ಮಂಗಲ ಅಂಗಡಿ ಅವರೊಬ್ಬರೇ ಇದುವರೆಗೆ ಸಂಸದರಾಗಿ ಆಯ್ಕೆಯಾಗಿದ್ದ ಮಹಿಳೆ. ಇವರಿಬ್ಬರನ್ನು ಹೊರತುಪಡಿಸಿ ಈಗ ಪ್ರಿಯಾಂಕಾ ಜಾರಕಿಹೊಳಿ 3ನೇ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 1957ರಿಂದ ಇಲ್ಲಿಯವರೆಗೆ ನಡೆದ ಒಟ್ಟು ಲೋಕಸಭಾ ಚುನಾವಣೆಯಲ್ಲಿ ಇದುವರೆಗೆ ರತ್ನಮಾಲಾ ಸವಣೂರು ಆಯ್ಕೆಯಾಗಿದ್ದ ಮಹಿಳೆ ಎಂಬ ಇತಿಹಾಸವನ್ನು ಕೂಡ ಈಗ ಪ್ರಿಯಾಂಕಾ ಅಳಿಸಿಹಾಕಿದ್ದಾರೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದ ಬಿ.ಶಂಕರಾನಂದ ಅವರು ಸತತವಾಗಿ 7 ಬಾರಿ ಆಯ್ಕೆಯಾಗಿದ್ದರು. ಆದರೆ, 8ನೇ ಬಾರಿಗೆ ಒಬ್ಬ ಮಹಿಳೆ ಕೈಯಿಂದ ಶಂಕರಾನಂದ ಅವರು ಸೋಲನುಭವಿಸಬೇಕಾಯಿತು. 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ರತ್ನಮಾಲಾ ಸವಣೂರು ಅವರು ಸ್ಪರ್ಧಿಸಿ ಶಂಕರಾನಂದ ವಿರುದ್ಧ ಜಯಿಸಿದರು. ಈಗ ರತ್ನಮಾಲಾ ಸವಣೂರು ಅವರ ನಂತರ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಲ ಸುರೇಶ ಅಂಗಡಿ ಅವರೊಬ್ಬರೇ ಮಹಿಳಾ ಸಂಸದೆಯಾಗಿ ಆಯ್ಕೆಯಾದವರು. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುರೇಶ ಅಂಗಡಿ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ ಅವರು ಕಾಂಗ್ರೆಸ್‌ನಿಂದ ಪೈಪೋಟಿ ನೀಡಿದ್ದರು. ಆದರೆ, ಆಯ್ಕೆಯಾಗಿರಲಿಲ್ಲ.