ಸಾರಾಂಶ
- ಎಚ್.ಕಡದಕಟ್ಟೆ ಸಮೀಪ ಸಾಯಿ ಗುರುಕುಲ ಶಾಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಗಂಗಾಧರ ಸ್ವಾಮಿ ಘೋಷಣೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
2024- 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ಶಾಲೆಗಳಿಗೆ ಜಿಲ್ಲಾಡಳಿತದಿಂದ ನಗದು ಬಹುಮಾನ ನೀಡಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಹೇಳಿದರು.ಪಟ್ಟಣದ ಎಚ್.ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿಯುತ ಶಾಲೆ ಸಭಾಂಗಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಮ್ಮ ಶಾಲೆಯ ಇತರೆ ಎಲ್ಲ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಯ ಬಗ್ಗೆ ನಿರಂತರವಾಗಿ ಚರ್ಚಿಸಿ ಕಾಲ ವಿಳಂಬವಿಲ್ಲದೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಹಂತದಲ್ಲಿ ಯಾವುದೇ ಸಮಸ್ಯೆ ಹಾಗೂ ಅಗತ್ಯಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರು ಜಿಲ್ಲಾಡಳಿತದ ಸಹಾಯ ಹಾಗೂ ಮಾರ್ಗದರ್ಶನ ಯಾವುದೇ ಹಿಂಜರಿಕೆ ಇಲ್ಲದೇ ಪಡೆಯುಬಹುದು ಎಂದರು.ಮೇಲಾಧಿಕಾರಿಗಳು ಹೇಳಿದ್ದಾರೆ ಎಂದು ಶಾಲೆಗಳಲ್ಲಿ ಯಾವುದೇ ಕಾರಣಕ್ಕೆ ಮಕ್ಕಳ ಮೇಲೆ ಒತ್ತಡಗಳನ್ನು ಹಾಕದೇ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಒಗ್ಗೂಡಿ ಪ್ರಾಮಾಣಿಕ ಮನೋಭಾವನೆಯಿಂದ ಕೆಲಸ ಮಾಡಬೇಕು. ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರನ್ನು ಮತ್ತು ಶಾಲೆಗಳನ್ನು ಉಳಿಸಿಕೊಳ್ಳಲು, ಮಕ್ಕಳ ಬೋಗಸ್ ದಾಖಲಾತಿ ಮತ್ತು ಹಾಜರಾತಿ ತೋರಿಸುವುದು ಬೇಡ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಶೂನ್ಯ ಫಲಿತಾಂಶ ಹಾಗೂ ಶೇ.40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಶಾಲೆ ಶಿಕ್ಷಕರೊಂದಿಗೆ ಮಾತನಾಡಿ, ಆ ಶಾಲೆಗಳ ಸಮಸ್ಯೆ ಕುರಿತು ಚರ್ಚಿಸಬೇಕು. ಶಿಕ್ಷಕರ ಕೊರತೆ ಇದ್ದರೆ ಕೂಡಲೇ ಗಮನಕ್ಕೆ ತರಬೇಕು. ಬಳಿಕ ಇಲ್ಲಿಗೆ ಉತ್ತಮ ಶಿಕ್ಷಕರನ್ನು ಹೊಂದಾಣಿಕೆ ಮಾಡಿ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ಎಲ್ಲರೂ ಸೇರಿ ಈ ಬಾರಿ ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಫಲಿತಾಂಶ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೋಟ್ರೇಶ್ ಮಾತನಾಡಿದರು. ಹೊನ್ನಾಳಿ ಬಿಇಒ ನಿಂಗಪ್ಪ ಮತ್ತು ಚನ್ನಗಿರಿ ಬಿಇಒ ಜಯಪ್ಪ ಅವರು ತಾಲೂಕುಗಳ ಶಾಲೆಗಳು, ಶಿಕ್ಷಕರ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಡಯಟ್ ಉಪನಿರ್ದೇಶಕಿ ಗೀತಾ, ಹೊನ್ನಾಳಿ ಕ್ಷೇತ್ರ ಸಂಯೋಜನಾಧಿಕಾರಿ ತಿಪ್ಪೇಶಪ್ಪ, ಅಕ್ಷರ ದಾಸೋಹ ಅಧಿಕಾರಿ ನಾಗೇಂದ್ರಪ್ಪ, ಬಿಆರ್‌ಪಿ ಮುದ್ದನಗೌಡ, ಬೆಸ್ಕಾಂ ಇಲಾಖೆ ಕಾರ್ಯಪಾಲಕ ಅಭಿಯಂತರ ರವಿಕಿರಣ್, ಎಇಇ ಜಯಪ್ಪ, ನ್ಯಾಮತಿ ತಾಲೂಕಿನ ಶ್ರೀನಿವಾಸ ದಾವಣಗೆರೆ ಇಒ ಚಂದ್ರಶೇಖರ್, ಸಾಯಿ ಗುರುಕುಲ ಆಡಳಿತ ಮಂಡಳಿಯ ಪ್ರದೀಪ್ ಗೌಡ, ಜ್ಞಾನವಾಹಿನಿ ಶಾಲೆಯ ರವಿಶಂಕರ್, ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲೂಕುಗಳ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.- - -
ಕೋಟ್‌ಶಾಲೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಲಿ ಯೋಜನೆ ಅನುಷ್ಠಾನಗೊಳಿಸಿಕೊಳ್ಳಬೇಕು. ಮನೆಗಳಲ್ಲಿ ಕೂಡ ಇದನ್ನು ಅನುಷ್ಠಾನಗೊಳಿಸಿಕೊಳ್ಳುವ ಮೂಲಕ ವಿದ್ಯುತ್ ಉಳಿತಾಯ ಹಾಗೂ ಆದಾಯ ಪಡೆದುಕೊಳ್ಳಬಹುದು. ಇದಕ್ಕೆ ಸರ್ಕಾರದ ಸಹಾಯಧನದ ಸೌಲಭ್ಯ ಕೂಡ ಇದೆ- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ
- - - -18ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ಎಚ್.ಕಡದಕಟ್ಟೆ ಸಮೀಪದ ಸಾಯಿ ಗುರುಕುಲ ವಸತಿಯುತ ಶಾಲೆ ಸಭಾಂಗಣದಲ್ಲಿ ಬುಧವಾರ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಉತ್ತಮಪಡಿಸುವ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿದರು.