ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಹಿಂದೂಗಳ ಧಾರ್ಮಿಕ ಹಾಗೂ ಪವಿತ್ರ ಕ್ಷೇತ್ರವಾಗಿರುವ ಶ್ರೀ ಧರ್ಮಸ್ಥಳದ ಬಗ್ಗೆ ಇಲ್ಲ-ಸಲ್ಲದ ಸುಳ್ಳು ಅಪಪ್ರಚಾರದ ಹಿಂದೆ ದೇಶದ ಎಡಪಂಥೀಯರ ಕೈವಾಡವಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಕೆ.ಆರ್. ಸುರೇಶ್ ಆರೋಪಿಸಿದರು.ನಗರದ ಚನ್ನಬಸಪ್ಪ ಹಮ್ಮಿಕೊಂಡಿದ್ದ ವಿಶ್ವಹಿಂದೂ ಪರಿಷತ್, ಬಜರಂಗದಳ, ಬಿಜೆಪಿ ಪಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಕೋಟ್ಯಾಂತರ ಹಿಂದೂಗಳ ಪವಿತ್ರ ಸ್ಥಳವಾಗಿದ್ದು, ಭಕ್ತರ ನಂಬಿಕೆ ಭಾವನೆಗಳಿಗೆ ಧಕ್ಕೆಯನ್ನು ತರುವ ಮೂಲಕ ಧರ್ಮಸ್ಥಳದ ಪಾವಿತ್ರ್ಯತೆಯನ್ನು ನಾಶ ಮಾಡಲು ಹೊರಟಿರುವ ಮತಾಂಧ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಹೇಶ್ ತಿಮರೋಡಿ ಮೊದಲು ಬಾಂಬೆಯಲ್ಲಿದ್ದು ಅಲ್ಲಿ ಕಾನೂನು ವಿರೋಧಿ ಚಟುವಟಿಕೆ ಪ್ರಕರಣದಲ್ಲಿ ಗಡಿಪಾರಾಗಿ ಶ್ರೀ ಕ್ಷೇತ್ರಕ್ಕೆ ಬಂದು ನೂರಾರು ಎಕರೆ ಜಾಗವನ್ನು ಖರೀದಿ ಮಾಡಿರುವುದು ಸಾರ್ವಜನಿಕ ಸತ್ಯವಾಗಿದ್ದು, ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂಬುದು ಮೊದಲು ತನಿಖೆಯಾಗಬೇಕೆಂದು ಆಗ್ರಹಿಸಿದರು.ಹಿಂದೂ ಧರ್ಮ ಹಾಗೂ ಹಿಂದೂಗಳನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕೆಲ ಮತಾಂದರು ಷಡ್ಯಂತ್ರ ರೂಪಿಸಿ ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಸಹೋದರಿ ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮೆಲ್ಲರ ಆಗ್ರಹವೂ ಆಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಎಲ್ಲಾ ಬಗೆಯ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲಿ. ಆದರೆ ಈ ನೆಪದಲ್ಲಿ ಶ್ರೀ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸದ ವಿರುದ್ಧ ಹಿಂದೂ ಧರ್ಮಿಯರು ಎಂದೆಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಬಜರಂಗದಳ ಜಿಲ್ಲಾ ಸಂಯೋಜಕ್ ಕೋಟೆ ಕಿರಣ್ ಭಾಜಪ ನಗರ ಅಧ್ಯಕ್ಷ ಮಂಜುನಾಥ್, ರಾಜೇಶ್ ಎಸ್‌ಸಿ ಮೋರ್ಚಾ ಅಧ್ಯಕ್ಷ ಶಿವ ಮುತ್ತು, ಆಟೋ ಕುಮಾರ್, ಬಿಜೆಪಿ ಮಹಿಳಾ ಮುಖಂಡರಾದ ಮಮತಾ, ಪವಿತ್ರ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರು ಆಗಮಿಸಿ ಸರ್ಕಾರದ ವಿರುದ್ಧ ಷಡ್ಯಂತರವನ್ನು ಮಾಡಿರುವಂತಹ ಎಡಪಂಥೀಯರ ವಿರುದ್ಧ ಘೋಷಣೆ ಕೂಗಿದರು. ಕೆ ಕೆ ಪಿ ಸುದ್ದಿ 02; ಹಿಂದೂಪರ ಸಂಘಟನೆಗಳ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ವಿರುದ್ಧ ನಗರದ ಚನ್ನಬಸಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.