ಜೀವಪರ ತತ್ವ ಪದಗಳನ್ನು ಪ್ರಚಾರ ಮಾಡಬೇಕು: ಕಾ.ತ.ಚಿಕ್ಕಣ್ಣ

| Published : Jul 11 2025, 12:31 AM IST

ಜೀವಪರ ತತ್ವ ಪದಗಳನ್ನು ಪ್ರಚಾರ ಮಾಡಬೇಕು: ಕಾ.ತ.ಚಿಕ್ಕಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಚನಕಾರರು ಮತ್ತು ಸೂಫಿ ಸಂತರು ಸುಸ್ಥಿರ ಸಮಾಜ ಕಟ್ಟಲು ಹೆಚ್ಚು ಶ್ರಮಿಸಿದ್ದಾರೆ. ಕೆಲವು ತತ್ವಪದಗಳಲ್ಲಿ ಮಹಿಳೆಯರನ್ನು ಕಡೆಗಣಿಸಿರುವ ಅಂಶಗಳು ಅಡಗಿವೆ. ಅವುಗಳನ್ನು ದೂರವಿಟ್ಟು ಜೀವವಿರೋಧಿ ಅಲ್ಲದ, ಜೀವಪರವಾದ ತತ್ವಪದಗಳನ್ನು ಹೆಚ್ಚು ಪ್ರಚಾರ ಮಾಡಬೇಕಿದೆ. ಮಹನೀಯರ ತತ್ವ ಪದಗಳನ್ನು ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಜೀವಪರವಾದ ತತ್ವಪದಗಳನ್ನು ಹೆಚ್ಚು ಪ್ರಚಾರ ಮಾಡಬೇಕಿದೆ ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅಭಿಪ್ರಾಯಪಟ್ಟರು.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಆವರಣದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ‘ತತ್ವಪದಗಳು ಮತ್ತು ಸಂಗೀತ ವೈವಿಧ್ಯ’ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ವಚನಕಾರರು ಮತ್ತು ಸೂಫಿ ಸಂತರು ಸುಸ್ಥಿರ ಸಮಾಜ ಕಟ್ಟಲು ಹೆಚ್ಚು ಶ್ರಮಿಸಿದ್ದಾರೆ. ಕೆಲವು ತತ್ವಪದಗಳಲ್ಲಿ ಮಹಿಳೆಯರನ್ನು ಕಡೆಗಣಿಸಿರುವ ಅಂಶಗಳು ಅಡಗಿವೆ. ಅವುಗಳನ್ನು ದೂರವಿಟ್ಟು ಜೀವವಿರೋಧಿ ಅಲ್ಲದ, ಜೀವಪರವಾದ ತತ್ವಪದಗಳನ್ನು ಹೆಚ್ಚು ಪ್ರಚಾರ ಮಾಡಬೇಕಿದೆ. ಮಹನೀಯರ ತತ್ವ ಪದಗಳನ್ನು ಅರಿತುಕೊಳ್ಳಬೇಕು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲವನ್ನು ಮೀರಿದ ಮನುಷ್ಯ ಅಂತಃಕರಣ ಪ್ರಧಾನವಾಗಬೇಕು ಎಂದು ಅವರು ಹೇಳಿದರು.

ಯಾವುದಾದರೊಂದು ಕಲಾಪ್ರಕಾರ ಉಳಿಯಬೇಕಾದರೆ ಯುವಕರ ಪಾತ್ರ ಮುಖ್ಯ. ಆದರೆ ಯುವ ಸಮೂಹ ಎಲ್ಲಿ ತಲುಪುತ್ತಿದೆ ಎಂಬ ಭಯ ಕಾಡುತ್ತಿದೆ. ಸ್ನೇಹಿತೆಯನ್ನೆ ಅತ್ಯಾಚಾರಗೊಳಿಸುವ ಹೀನ ಮನಸ್ಥಿಗೆ ಕೆಲವರು ಜಾರಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ, ಸುತ್ತಲಿನ ಪರಿಸರ ಯುವ ಸಮೂಹಕ್ಕೆ ಏನು ಕೊಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ತತ್ತ್ವಪದಕಾರರು ಅನಕ್ಷರಸ್ಥರಾಗಿದ್ದರೂ ಲೋಕಜ್ಞಾನಿಗಳಾಗಿದ್ದರು. ಅವರು ತತ್ವಪದಗಳನ್ನು ಸಂಗೀತ ಮೂಲಕ ಸಮಾಜಕ್ಕೆ ನೀಡಿದ್ದರಿಂದ ಅದು ಜನಸಾಹಿತ್ಯವಾಗಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಕನಕದಾಸರು ತನ್ನದೇ ತತ್ತ್ವ ಚಿಂತನೆಯಲ್ಲಿ ಸಮಾಜದ ಉದ್ಧಾರಕ್ಕೆ ಶ್ರಮಿಸಿದ್ದಾರೆ. ಅಂದಿನ ಕಾಲದ ಜಾತಿ ವ್ಯವಸ್ಥೆ, ಶೋಷಣೆ ಇವೆಲ್ಲವನ್ನು ಟೀಕಿಸುತ್ತಾ, ಕ್ಲಿಷ್ಟಕರ ಕಾವ್ಯಗಳನ್ನು ಸರಳ ರೂಪದಲ್ಲಿ ಜನರಿಗೆ ತಿಳಿಹೇಳುವ ಕೆಲಸ ಮಾಡಿದ್ದರು. ಅವರ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ ಎಂದರು.

ಬಳಿಕ ‘ತತ್ವಪದ-ಕರ್ನಾಟಕ ಸಂಗೀತ’ ಎಂಬ ವಿಷಯದ ಕುರಿತು ಡಾ. ಸುಕನ್ಯಾ ಪ್ರಭಾಕರ್, ‘ತತ್ವಪದ ಮತ್ತು ಕನಕ ಕೀರ್ತನೆಗಳು ಸಂಗೀತ ಸಹಚರ್ಯ’ ಎಂಬ ವಿಷಯದ ಕುರಿತು ಹುಸೇನ್ ಸಾಬ್, ‘ತತ್ವಪದ-ಗಮಕ’ದ ಬಗ್ಗೆ ಬಿ.ಡಿ. ಶಂಕರೇಗೌಡ ಹಾಗೂ ‘ತತ್ವಪದ- ನೃತ್ಯ ಕಲೆ’ ಬಗ್ಗೆ ಡಾ. ತುಳಸಿ ರಾಮಚಂದ್ರ ವಿಷಯ ಮಂಡಿಸಿದರು. ಪುಟ್ಟಮುತ್ತಮ್ಮ ಮತ್ತು ತಂಡ ಕೆರೆಗೋಡು ತಂಡದವರು ತತ್ತ್ವಪದ ಗಾಯನ ನಡೆಸಿಕೊಟ್ಟರು.

ವಿವಿಯ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್, ಸದಸ್ಯ ಸಂಚಾಲಕ ಡಾ. ಚಕ್ಕೆರೆ ಶಿವಶಂಕರ್ ಇದ್ದರು.