ಸಾರಾಂಶ
ಸುರಪುರ : ಯಾದಗಿರಿ ಜಿಲ್ಲೆಯ ನಗರ ಪೊಲೀಸ್ ಠಾಣಾ ಪಿಎಸ್ಐ ಪರಶುರಾಮ ಸಾವಿನ ಬಗ್ಗೆ ಸೂಕ್ತ ತನಿಖೆ ಮಾಡಿಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯ ಸಂಘಟನಾ ಕಾರ್ಯದರ್ಶಿ, ನ್ಯಾಯವಾದಿ ಆದಪ್ಪ ಹೊಸ್ಮನಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲೆ ನಗರ ಪೊಲೀಸ್ ಠಾಣಾ ಪಿಎಸ್ಐ ಪರಶುರಾಮ ಸಾವು ದಲಿತ ಸಮುದಾಯದ ನೌಕರರ ಕುಟುಂಬಸ್ಥರಿಗೆ ಆತಂಕ ಉಂಟು ಮಾಡಿದೆ. ಯಾದಗಿರಿ ನಗರ ಠಾಣೆಯಲ್ಲಿ ಮುಂದುವರಿಯಲು ಸ್ಥಳೀಯ ಜನ ಪ್ರತಿನಿಧಿಗಳು ಪಿಎಸ್‌ಐ ಪರಶುರಾಮರವರಿಗೆ 30 ಲಕ್ಷ ರು.ಗಳು ಲಂಚದ ಬೇಡಿಕೆ ಇಟ್ಟಿದ್ದು, ನೋಡಿದರೆ ಬೇಲಿಯೇ ಎದ್ದು ಜಮೀನು ಮೇಯ್ದಂತಾಗಿದೆ.
ಜನಪ್ರತಿನಿಧಿಗಳು ದಕ್ಷ, ನಿಷ್ಠಾವಂತ ಅಧಿಕಾರಿಗಳಿಗೆ ಲಂಚ ಮತ್ತು ಸುಲಿಗೆ ಮಾಡುವಂತೆ ಪ್ರಚೋದನೆ ನೀಡಿದಂತಾಗುತ್ತದೆ. ದಕ್ಷ, ನಿಷ್ಠಾವಂತ ಅಧಿಕಾರಿಗಳಿಗೆ ಕೈ ಕಟ್ಟಿದಂತಾಗುತ್ತದೆ. ಸರ್ಕಾರ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಜನ ಪ್ರತಿನಿಧಿಗಳ (ಮಿನಿಟ್) ಶಿಫಾರಸು ಪದ್ಧತಿಯನ್ನು ರದ್ದುಪಡಿಸಬೇಕು. ಇಂತಹ ಘಟನೆಗಳು ಮರು ಕಳುಹಿಸದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪಿಎಸ್‌ಐ ಪರಶುರಾಮ ಸಾವು ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಅವರ ಪತ್ನಿಗೆ ಪಿಎಸ್‌ಐ ಅವರ ಸ್ಥಾನಮಾನದ ಸರ್ಕಾರಿ ನೌಕರಿ ಕೊಡಿಸಬೇಕು. ರಾಜ್ಯದಲ್ಲಿ ದಲಿತ ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಿಎಂಗೆ ನಮ್ಮ ಸಂಘಟನೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.