ಗ್ರೂಪ್ ಡಿ ನೌಕರರ ಸಮಸ್ಯೆ ಪರಿಹಾರ: ಡಾ.ಮಂತರ್ ಗೌಡ ಭರವಸೆ

| Published : Jan 15 2024, 01:45 AM IST

ಸಾರಾಂಶ

ತಮ್ಮ ಹಲವು ಸಮಸ್ಯೆಗಳನ್ನು ಸರಿಪಡಿಸಲು ಕೋರಿ ಗ್ರೂಪ್ ಡಿ ನೌಕರರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರ ಮುಖೇನ ಮನವಿ ಸಲ್ಲಿಸಿದ್ದರು. ತೆನ್ನಿರ ಮೈನಾ, ಮನವಿಯನ್ನು ಶಾಸಕ ಡಾ.ಮಂತರ್ ಗೌಡ ಅವರಿಗೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ (ಮೆಡಿಕಲ್ ಕಾಲೇಜ್ ಮಡಿಕೇರಿ)ಯಲ್ಲಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರ ಮೂಲಸೌಲಭ್ಯದ ಮನವಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದಾರೆ.ನೇರ ನೇಮಕಾತಿಗೆ ಕೋರಿಕೆ, ಹೊರಗುತ್ತಿಗೆಯ ಏಜೆನ್ಸಿ ಪ್ರತಿ ತಿಂಗಳ ಗಣಕೀಕೃತ ವೇತನ ರಸೀತಿ ನೀಡದೆ ಇರುವುದು, ಇಎಸ್‌ಪಿ ಮತ್ತು ಇಎಸ್‌ಐ ಸೌಲಭ್ಯದ ಮೊತ್ತ ಸರಿಯಾಗಿ ಜಮೆ ಆಗದಿರುವುದು, ಸಿಬ್ಬಂದಿ ವರ್ಗದವರಿಗೆ ಊಟದ ವ್ಯವಸ್ಥೆ ಇಲ್ಲದೆ ಇರುವುದು, ವಾಹನ ವ್ಯವಸ್ಥೆ ಇಲ್ಲದಿರುವುದು, ಪ್ರತ್ಯೇಕ ಸಿಬ್ಬಂದಿ ಕೊಠಡಿ ವ್ಯವಸ್ಥೆಯಿಲ್ಲದೆ ಮಹಿಳಾ ನೌಕರರು ಸಂಕಷ್ಟದಲ್ಲಿರುವುದು ಸೇರಿದಂತೆ ಅನೇಕ ನ್ಯೂನತೆಗಳನ್ನು ಸರಿಪಡಿಸಲು ಕೋರಿ ಗ್ರೂಪ್ ಡಿ ನೌಕರರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರ ಮುಖೇನ ಮನವಿ ಸಲ್ಲಿಸಿದ್ದರು.

ಭಾನುವಾರ ತೆನ್ನಿರ ಮೈನಾ, ಮನವಿಯನ್ನು ಶಾಸಕ ಡಾ.ಮಂತರ್ ಗೌಡ ಅವರಿಗೆ ಸಲ್ಲಿಸಿದರು.

ಮನವಿ ಪರಿಶೀಲಿಸಿದ ಶಾಸಕರು, ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗೆ ತಾವು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೇರಿ ಸರ್ಕಾರದ ಗಮನಕ್ಕೆ ತರುವುದಾಗಿಯೂ, ಮೂಲಭೂತ ಸಮಸ್ಯೆಗಳನ್ನು ತಕ್ಷಣವೇ ಬಗೆ ಹರಿಸಲು ಕಾಲೇಜು ಆಡಳಿತ ಮಂಡಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಯುವ ಕಾಂಗ್ರೆಸ್ ಮುಖಂಡರಾದ ಕವನ್ ಕೊತ್ತೋಳಿ ಇದ್ದರು.