ಸಾರ್ವಜನಿಕರಿಂದ ಸುಮಾರು 150ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಹೆಚ್ಚಿನ ಅರ್ಜಿಗಳು ಭೂ ಧಾಖಲೆ, ಕಂದಾಯ, ಸರ್ವೆ ಹಾಗೂ ಭೂ ಪರಿವರ್ತನೆಗೆ ಸಂಬಂಧಪಟ್ಟವಾಗಿದ್ದವು. ಅರ್ಜಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕೆಲವೊಂದು ಸಮಸ್ಯೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಭವಿಸಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೇಲೂರುಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಪ್ರತಿ ತಿಂಗಳ ಮೂರನೇ ಶನಿವಾರವನ್ನು ‘ಜನಸ್ಪಂದನ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.ತಾಲೂಕು ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಂದ ಸುಮಾರು 150ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಹೆಚ್ಚಿನ ಅರ್ಜಿಗಳು ಭೂ ಧಾಖಲೆ, ಕಂದಾಯ, ಸರ್ವೆ ಹಾಗೂ ಭೂ ಪರಿವರ್ತನೆಗೆ ಸಂಬಂಧಪಟ್ಟವಾಗಿದ್ದವು. ಅರ್ಜಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಕೆಲವೊಂದು ಸಮಸ್ಯೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಭವಿಸಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ತಕ್ಷಣವೇ ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ವೇದಿಕೆಯನ್ನು ಸಾರ್ವಜನಿಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳಿಗೆ ಲಂಚ ನೀಡುವುದು ಅಥವಾ ಅವರ ಮೇಲೆ ಒತ್ತಡ ಹೇರುವಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದರು. ಪ್ರತಿ ತಿಂಗಳ ಮೂರನೇ ಶನಿವಾರದಂದು ಜನಸ್ಪಂದನ ದಿನವನ್ನು ಆಚರಿಸಲಾಗುತ್ತಿದ್ದು, ಆ ದಿನ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಒಂದೇ ಸ್ಥಳದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಿರುತ್ತಾರೆ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಇಟ್ಟು ತ್ವರಿತ ಹಾಗೂ ತಾತ್ಕಾಲಿಕ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಸ್ಯೆಯ ಮೂಲ ಕಾರಣ, ಅದರ ಹಿನ್ನೆಲೆ ಹಾಗೂ ಮುಂದಿನ ಮಾರ್ಗದರ್ಶನವನ್ನು ಅಲ್ಲಿಯೇ ಸ್ಪಷ್ಟವಾಗಿ ತಿಳಿಸಬಹುದು. ಅಧಿಕಾರಿಗಳು ಲಭ್ಯವಿಲ್ಲ ಎಂಬ ಕಾರಣ ಹೇಳಲು ಯಾವುದೇ ಅವಕಾಶ ಇರುವುದಿಲ್ಲ. ಬೇರೆ ಬೇರೆ ಕಚೇರಿಗಳಿಗೆ ಅಲೆಯುವ ಅವಶ್ಯಕತೆಯೂ ತಪ್ಪುತ್ತದೆ. ಹಿಂದೆ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆದರೆ ಈಗ ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿರುವುದರಿಂದ ಅರ್ಜಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು .
ತಾಲೂಕು ಮಟ್ಟದಲ್ಲೇ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸುವುದರಿಂದ ಅವು ಜಿಲ್ಲಾಮಟ್ಟದ ತನಕ ಹೋಗುವುದು ಕಡಿಮೆಯಾಗುತ್ತದೆ. ನಮ್ಮ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಸಹ ಜನಸ್ಪಂದನ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಂದು ಬೇಲೂರಿನಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದು, ಕಂದಾಯ ಹಾಗೂ ಸರ್ವೆ ಇಲಾಖೆಗೆ ಸಂಬಂಧಿಸಿದ ಅಡಚಣೆಗಳನ್ನು ಪರಿಹರಿಸುವ ಪ್ರಯತ್ನಗಳು ಇಲ್ಲಿ ನಡೆಯುತ್ತಿವೆ. ಇಂತಹ ಜನಸ್ಪಂದನ ಸಭೆಗಳ ಫಲವಾಗಿ ಸಾರ್ವಜನಿಕರಲ್ಲಿರುವ ಸಮಸ್ಯೆಗಳು, ಕಷ್ಟ-ಕಾರ್ಪಣ್ಯಗಳು ಆದಷ್ಟು ನಿವಾರಣೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಕೂಡ ಜನರೊಂದಿಗೆ ಸ್ಪಂದನಾತ್ಮಕವಾಗಿ ವರ್ತಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಸಾರ್ವಜನಿಕರಿಗೆ ಏನೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮ ಬಳಿ ಹೇಳಿಕೊಂಡರೆ ಸಾಧ್ಯವಾದಷ್ಟು ಅವುಗಳನ್ನು ಪರಿಹರಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.ಈ ಜನಸ್ಪಂದನ ಸಭೆಯಲ್ಲಿ ಉಪವಿಭಾಧಿಕಾರಿ ಮಂಜುನಾಥ್, ಭೂ ಪರಿವರ್ತನೆ ಜಿಲ್ಲಾ ಸಹಾಯಕ ಅಧಿಕಾರಿ ಹೇಮಲತಾ, ಡಿವೈಎಸ್ಪಿ ಗೋಪಿ, ದಂಡಾಧಿಕಾರಿ ಶ್ರೀಧರ ಕಂಕನವಾಡಿ, ವೃತ್ತ ನಿರೀಕ್ಷಕ ರೇವಣ್ಣ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.