ಸಾರಾಂಶ
ಹರಿಹರ ನಗರದ ಮೆಟ್ಟಿಲು ಹೊಳೆ ರಸ್ತೆಯ ನೇಕಾರ ಕುರುಹಿನಶೆಟ್ಟಿ ಸಮಾಜದ ದೇವಸ್ಥಾನದಲ್ಲಿ ಏ.೪ರಂದು, ಶ್ರೀ ಜಗದ್ಗುರು ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಕಾಶಿ ನೀಲಕಂಠೇಶ್ವರ ಸ್ವಾಮಿ ಹಾಗೂ ಗಣಪತಿ ನಂದಿ ದೇವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ನಡೆಯಲಿದೆ. ಈ ಹಿನ್ನೆಲೆ ಭಾನುವಾರ ಕುರುಹಿನಶೆಟ್ಟಿ ಸಮಾಜದಿಂದ ದೇವರ ನೂತನ ಶಿಲಾಮೂರ್ತಿಗಳ ಮೆರವಣಿಗೆಗೆ ಬೆಟಗೇರಿಯ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಶ್ರೀ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಮೆಟ್ಟಿಲು ಹೊಳೆ ರಸ್ತೆಯ ನೇಕಾರ ಕುರುಹಿನಶೆಟ್ಟಿ ಸಮಾಜದ ದೇವಸ್ಥಾನದಲ್ಲಿ ಏ.೪ರಂದು, ಶ್ರೀ ಜಗದ್ಗುರು ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಕಾಶಿ ನೀಲಕಂಠೇಶ್ವರ ಸ್ವಾಮಿ ಹಾಗೂ ಗಣಪತಿ ನಂದಿ ದೇವರ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ನಡೆಯಲಿದೆ. ಈ ಹಿನ್ನೆಲೆ ಭಾನುವಾರ ಕುರುಹಿನಶೆಟ್ಟಿ ಸಮಾಜದಿಂದ ದೇವರ ನೂತನ ಶಿಲಾಮೂರ್ತಿಗಳ ಮೆರವಣಿಗೆಗೆ ಬೆಟಗೇರಿಯ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಶ್ರೀ ಚಾಲನೆ ನೀಡಿದರು.ನಗರದ ಶಿಬಾರ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದರು. ವೀರಗಾಸೆ, ಡೊಳ್ಳು, ಸಮಾಳ ಹಾಗೂ ಮಕ್ಕಳು ಶಿವ ಮತ್ತು ಪಾರ್ವತಿ ವೇಷ ಧರಿಸಿ ಪಾಲ್ಗೊಂಡಿದ್ದರು. ಜೊತೆಗೆ ಹಲವಾರು ಕಲಾ ತಂಡಗಳು ಭವ್ಯ ಮೆರವಣಿಗೆಗೆ ಮೆರಗು ತಂದರು.
ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇವಸ್ಥಾನ ಆವರಣದಲ್ಲಿ ಅಂತ್ಯಗೊಂಡಿತು. ಏ.೩ರಂದು ಶ್ರೀ ದತ್ತಾತ್ರೇಯ ಭಟ್ ನೇತೃತ್ವದಲ್ಲಿ ಬೆಳಗ್ಗೆ ೮ ರಿಂದ ಗಂಗಾನಯನ, ಗಣಪತಿ, ನವಗ್ರಹ ಪೂಜೆ, ಹೋಮ ಬಲಿಹರಣ ಪೂಜೆ ನಡೆಯುವುದು. ಮಹಿಳಾ ಮಂಡಳಿ ಅವರಿಂದ ಭಜನೆ, ಮಧ್ಯಾಹ್ನ ೨ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.ಏ.೪ರಂದು ಶ್ರೀ ವಾರಣಾಸಿಯ ಕಾಶಿ ವಿಶ್ವನಾಥ ಸನ್ನಿಧಾನದಿಂದ ತರಿಸಲ್ಪಟ್ಟಿರುವ ನೂತನ ಶ್ರೀ ಕಾಶಿ ನೀಲಕಂಠೇಶ್ವರ, ನಂದಿ ಗಣಪತಿ ದೇವರುಗಳ ಪ್ರಾಣ ಪ್ರತಿಷ್ಟಾಪನೆ ಬೆಳಗ್ಗೆ ೧೧-೩೮ ರಿಂದ ೧೨-೨೯ಕ್ಕೆ ಶ್ರೀ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸುವರು. ಅನಂತರ ಶ್ರೀಗಳಿಂದ ನಾಮಫಲಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ರಾಮಪ್ಪ, ಗಂಗಾವತಿ ಮಾಜಿ ಶಾಸಕ ಮಲ್ಲಿಕಾರ್ಜುನ್ ಮೆರವಣಿಗೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಸಮಾಜದ ಅಧ್ಯಕ್ಷ ಬಸವರಾಜ್ ಇಂಡಿ ಮತ್ತು ಕಾರ್ಯದರ್ಶಿ ಚಂದ್ರಶೇಖರ್ ಅಮ್ರದ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.- - - -೩೧ಎಚ್‌ಆರ್‌ಆರ್೨:
ಹರಿಹರದಲ್ಲಿ ಕುರುಹಿನಶೆಟ್ಟಿ ಸಮಾಜದಿಂದ ಭಾನುವಾರ ದೇವರ ನೂತನ ಶಿಲಾಮೂರ್ತಿಗಳ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡರು.