ಗುಗ್ಗಳ ಮೆರವಣಿಗೆಯಲ್ಲಿ ಸ್ವಾಮಿ ಭಕ್ತರು ಕೆನ್ನೆಗೆ, ಕೈಗೆ ಶಸ್ತ್ರ ಹಾಕಿಕೊಂಡು ಭಕ್ತಿ ಮೆರೆದರು. ಹತ್ತಾರು ಯುವ ಭಕ್ತರು ಒಬ್ಬರಿಗೊಬ್ಬರು ಕೆನ್ನೆಯ ರಂಧ್ರದ ಮೂಲಕ ಉದ್ದನೆಯ ದಾರ ಸೇರಿಸಿ ಹೊರ ತೆಗೆದರು.

ಕೊಟ್ಟೂರು: ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಶ್ರೀ ಪೂರ್ವದ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಮೆರವಣಿಗೆ ಗುರುವಾರ ನಡೆಯಿತು.ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಜೋಡಿ ರಥೋತ್ಸವ ಮಾ. ೨೨ರಂದು ಜರುಗಲಿದ್ದು, ಈ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳದ ಮೆರವಣಿಗೆಯನ್ನು ನಡೆಸಲಾಯಿತು. ಬೆಳಗಿನ ಜಾವದಲ್ಲಿ ಗಂಗೆ ಪೂಜೆ ನೆರವೇರಿದ ಆನಂತರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿದ್ದ ಅಗ್ನಿ ಕುಂಡವನ್ನು ಮಹಿಳೆಯರು ಸೇರಿ ಅನೇಕರು ಹಾಯ್ದರು. ಗುಗ್ಗಳ ಮೆರವಣಿಗೆಯಲ್ಲಿ ಸ್ವಾಮಿ ಭಕ್ತರು ಕೆನ್ನೆಗೆ, ಕೈಗೆ ಶಸ್ತ್ರ ಹಾಕಿಕೊಂಡು ಭಕ್ತಿ ಮೆರೆದರು. ಹತ್ತಾರು ಯುವ ಭಕ್ತರು ಒಬ್ಬರಿಗೊಬ್ಬರು ಕೆನ್ನೆಯ ರಂಧ್ರದ ಮೂಲಕ ಉದ್ದನೆಯ ದಾರ ಸೇರಿಸಿ ಹೊರ ತೆಗೆದರು. ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಜರುಗಿದ ಮೆರವಣಿಗೆ ಸಂಪನ್ನವಾದ ಮೇಲೆ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ವೀರಭದ್ರೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಸಮಿತಿಯವರು ಸಿದ್ಧತೆ ಮಾಡಿಕೊಂಡಿದ್ದಾರೆ. ಮಾ. ೨೨ರಂದು ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸಂಜೆ ಹೊತ್ತಿನಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆನಂತರ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಸಮಿತಿಯವರು ತಿಳಿಸಿದ್ದಾರೆ.