ಸಾರಾಂಶ
ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಉತ್ಪಾದಿಸಿದ ದೀಪಾವಳಿ ಗಿಫ್ಟ್ಫ್ಟ್ ಬಿಡುಗಡೆ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ, ಉಡುಪಿ ಜಿಲ್ಲೆ ಇಡೀ ದೇಶಕ್ಕೆ ಮಾದರಿಯಾಗುವಂತೆ ಮಾಡಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ಅವರು ಇಂದು ಉಡುಪಿ ತಾಪಂ ಆವರಣದಲ್ಲಿರುವ ಸಂಜೀವಿನಿ ಮಾರಾಟ ಮಳಿಗೆಯಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ವಿವಿಧ ವಿನ್ಯಾಸದ ಮಣ್ಣಿನ ಹಣತೆ, ದೀಪಾವಳಿ ಗಿಫ್ಟ್ ಪ್ಯಾಕ್ ಹಾಗೂ ಉಡುಪಿ ಸಂಜೀವಿನಿ ಕಜೆ ಅಕ್ಕಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂಜೀವಿನಿ ಸಂಘದ ಸದಸ್ಯರ ಹಡಿಲುಗದ್ದೆಗಳಲ್ಲಿ ಭತ್ತ ಬೆಳೆಸುವ ಮೂಲಕ ಜನರಲ್ಲಿ ಕೃಷಿಯ ಬಗ್ಗೆ ಜಾಗೃತಿ, ಆಸಕ್ತಿ ಮೂಡಿಸುತ್ತಿದ್ದಾರೆ. ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಭತ್ತದ ಜೊತೆಗೆ ತರಕಾರಿಯನ್ನೂ ಬೆಳೆಸಿದರೆ ವರ್ಷವಿಡೀ ಉದ್ಯೋಗ ಆದಾಯ ಸಾಧ್ಯವಾಗುತ್ತದೆ ಎಂದವರು ಸಲಹೆ ಮಾಡಿದರು.ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಸಂಜೀವಿನಿ ಸ್ವ-ಸಹಾಯ ಸಂಘದ ತಯಾರಿಸಿದ ದೀಪಾವಳಿ ಗಿಫ್ಟ್ ಪ್ಯಾಕ್ ಮತ್ತು ಸಾವಯವ ಕಜೆ ಅಕ್ಕಿಯನ್ನು ಬಳಸುವ ಮೂಲಕ ಅವರಿಗೆ ನೆರವಾಗಿರಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿ.ಪಂ. ಮುಖ್ಯ ಯೋಜನಾಕಾರಿ ಶ್ರೀನಿವಾಸ ರಾವ್, ಜಿ.ಪಂ. ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಕೃಷಿ ಇಲಾಖೆಯ ಚಂದ್ರಶೇಖರ್, ತಾ.ಪಂ. ಕಾರ್ಯನಿರ್ವಹಣಾಕಾರಿ ವಿಜಯಾ, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.