ಪ್ರೊ. ಎಸ್.ಬಿ. ರಂಗನಾಥ ಹೆಸರು ಚಿರಸ್ಥಾಯಿಗೊಳಿಸಿ: ಸಿರಿಗೆರೆ ಶ್ರೀ

| Published : Sep 06 2024, 01:04 AM IST

ಸಾರಾಂಶ

ಯಾವುದೇ ಹುದ್ದೆ ಇಲ್ಲದೇ, ಅಧಿಕಾರವನ್ನು ಮುಖ್ಯವಾಗಿಸಿಕೊಳ್ಳದೇ, ಕನ್ನಡ ಸೇವೆಯನ್ನೇ ಮುಖ್ಯವಾಗಿಸಿಕೊಂಡು, ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್.ಬಿ. ರಂಗನಾಥರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸ ಈ ಭವನದಲ್ಲಿ ಆಗಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದರು.

- ದಿ।। ಪ್ರೊ. ಎಸ್.ಬಿ. ರಂಗನಾಥ್ ನುಡಿನಮನ ಕಾರ್ಯಕ್ರಮ । ಕುವೆಂಪು ಭವನಕ್ಕೆ ಅಪಾರ ಶ್ರಮ: ಸ್ವಾಮೀಜಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವುದೇ ಹುದ್ದೆ ಇಲ್ಲದೇ, ಅಧಿಕಾರವನ್ನು ಮುಖ್ಯವಾಗಿಸಿಕೊಳ್ಳದೇ, ಕನ್ನಡ ಸೇವೆಯನ್ನೇ ಮುಖ್ಯವಾಗಿಸಿಕೊಂಡು, ದಾವಣಗೆರೆಯಲ್ಲಿ ಕುವೆಂಪು ಕನ್ನಡ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್.ಬಿ. ರಂಗನಾಥರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸ ಈ ಭವನದಲ್ಲಿ ಆಗಬೇಕು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ದಿವಂಗತ ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ನುಡಿನಮನ ಕಾರ್ಯಕ್ರಮ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕುವೆಂಪು ಭವನಕ್ಕೆ ಜಾಗದಿಂದ ಹಿಡಿದು, ಕಟ್ಟಡ ನಿರ್ಮಾಣದವರೆಗೆ ಪ್ರೊ.ರಂಗನಾಥ ಕೆಲಸ ಮಾಡಿದ್ದಾರೆ. ಅಂತಹವರ ಹೆಸರು ಚಿರಸ್ಥಾಯಿಯಾಗಿಸುವ ಕೆಲಸವನ್ನು ಸಂಬಂಧಿಸಿದವರು ಮಾಡಲಿ ಎಂದರು.

ಸಿರಿಗೆರೆ ಹಿರಿಯ ಗುರುಗಳು ರಂಗನಾಥರನ್ನು ಅಂಟುಗೆ ರಂಗಣ್ಣ ಎನ್ನುತ್ತಿದ್ದರು. ಯಾವುದೇ ಕೆಲಸವನ್ನೇ ವಹಿಸಿದರೂ, ಅದನ್ನು ಮುಗಿಸುವ ತನಕ ಪ್ರೊ.ರಂಗನಾಥ ಬಿಡುತ್ತಿದ್ದವರಲ್ಲ. ಹಿರಿಯ ಜಗದ್ಗುರು ನಂತರ ನಮಗೂ ಅಂಟಿಕೊಂಡಿದ್ದ ರಂಗನಾಥ್, ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು. ಅದು ಆ ವ್ಯಕ್ತಿಯ ಕಾರ್ಯದಕ್ಷತೆ ಪ್ರತೀಕವಾಗಿದೆ ಎಂದು ಸ್ಮರಿಸಿದರು.

ಅಪರಿಮಿತ ಸೇವೆ:

ವಯಸ್ಸಾದ ನಂತರ ತಾವಾಗಿಯೇ ಅನೇಕರು ವಿಲ್ ಬರೆಯುತ್ತಾರೆ. ಇನ್ನು ಕೆಲವರು ಮಕ್ಕಳ ಒತ್ತಡಕ್ಕೆ ವಿಲ್ ಬರೆಸುತ್ತಾರೆ. ಆದರೆ, ರಂಗನಾಥ್ ಯಾವುದೇ ವಿಲ್ ಬರೆಯಲಿಲ್ಲ. ಮಕ್ಕಳೂ ಬರೆಸಲಿಲ್ಲ. ರಂಗನಾಥ ಜೀವಿತಾವಧಿಯ ಕೊನೆ ಕಾಲದಲ್ಲಿ ಭಕ್ತಿಯ ವಿಲ್ ಬರೆದಿದ್ದಾರೆ. ಪ್ರೊ. ಎಸ್.ಬಿ. ರಂಗನಾಥ ಸಾಮಾನ್ಯ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಕೊನೆಗೆ ಆಡಳಿತಾಧಿಕಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಇದೆಲ್ಲವೂ ರಂಗನಾಥರ ಶಿಸ್ತು, ಕಾರ್ಯದಕ್ಷತೆ, ಬದ್ಧತೆಯ ಪ್ರತೀಕವಾಗಿದೆ. ಅಲ್ಪವೇತನ ಪಡೆದು ಅಪರಿಮಿತ ಸೇವೆ ಸಲ್ಲಿಸಿದ ರಂಗನಾಥ ಸಿರಿಗೆರೆ ಮಠದ ಜೊತೆ ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಶ್ರೀಗಳು ಶ್ಲಾಘಿಸಿದರು.

60 ವರ್ಷ ಶಿಕ್ಷಣ ಸೇವೆ:

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಚ್.ವಿ. ವಾಮದೇವಪ್ಪ ಮಾತನಾಡಿ, ಪ್ರೊ. ಎಸ್.ಬಿ. ರಂಗನಾಥ ಆದರ್ಶ ಶಿಕ್ಷಕರು. 60 ವರ್ಷ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ನಿರಂತರ ಕಾರ್ಯನಿರ್ವಹಿಸಿದ ಸಹೃದಯಿ, ಮಿತಭಾಷಿ. 1962ರಲ್ಲಿ ಸಿರಿಗೆರೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡು, ಸಾಹಿತಿ, ಅನುವಾದಕ, ಪ್ರಾಂಶುಪಾಲರು, ಪತ್ರಕರ್ತರಾಗಿ ಎಲ್ಲ ಕಡೆ ಕೆಲಸ ಮಾಡಿದವರು. ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದವರು ಪ್ರೊ. ಎಸ್.ಬಿ. ರಂಗನಾಥ ಎಂದು ಸ್ಮರಿಸಿದರು.

ನಿವೃತ್ತ ಪ್ರಾಚಾರ್ಯ ಡಾ.ನಾ.ಲೋಕೇಶ ಒಡೆಯರ್ ಮಾತನಾಡಿ, ರಂಗನಾಥ ಸಾರ್ಥಕ ಜೀವನ ಸಾಗಿಸಿದವರು. ತಾಳಿದವನು ಬಾಳಿಯಾನು ಎಂಬುದರ ಪ್ರತೀಕವಾಗಿದ್ದರು. ವಿಶಿಷ್ಟ ಮನೋಧರ್ಮ ಬದ್ಧತೆಯಿಂದ ಕೆಲಸ ಮಾಡಿದವರು. ಜೀವನದಲ್ಲಿನ ಶಿಸ್ತು, ಬದ್ಧತೆ, ಸಮರ್ಪಣಾ ಮನೋಭಾವದ ಸಂಕೇತವಾಗಿದ್ದರು ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪ್ರಪಂಚ ಮರೆಯಲಾಗದಂತ ಕೆಲಸ ಮಾಡಿದರು. ಖ್ಯಾತಿವೆತ್ತ ಕೃತಿಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದರು. ರಂಗನಾಥರ ಹೆಸರು ಚಿರಸ್ಥಾಯಿಯಾಗಿರುವಂತೆ ಕುವೆಂಪು ಕನ್ನಡ ಭವನದಲ್ಲಿ ಏನಾದರೂ ಕೆಲಸವಾಗಬೇಕು. ರಂಗನಾಥರು ಕೆಲಸ ಮಾಡಿದ್ದನ್ನು ಪರಿಚಯಿಸುವಂತಾಗಬೇಕು ಎಂದು ಆಶಿಸಿದರು. ಎಸ್.ಬಿ. ರಾಜಶೇಖರ್ ಸ್ವಾಗತಿಸಿದರು. ನಾಗರಾಜ್ ಸಿರಿಗೆರೆ ವಂದಿಸಿದರು. ರಂಗನಾಥ್ ಅಭಿಮಾನಿ ಬಳಗದ ನೂರಾರು ಜನರು ಭಾಗವಹಿಸಿದ್ದರು.................ಕ್ಯಾಪ್ಷನ್5ಕೆಡಿವಿಜಿ2-ದಾವಣಗೆರೆಯಲ್ಲಿ ಗುರುವಾರ ಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಸ್.ಬಿ.ರಂಗನಾಥರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. .............5ಕೆಡಿವಿಜಿ3-ದಾವಣಗೆರೆಯಲ್ಲಿ ಗುರುವಾರ ಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರೊ.ಎಸ್.ಬಿ.ರಂಗನಾಥರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಿಲ್ವಪತ್ರೆಯನ್ನು ಅರ್ಪಿಸಿದರು.