ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯ: ಪ್ರೊ.ಎಸ್.ಆರ್. ನಿರಂಜನ

| Published : Jun 25 2024, 12:30 AM IST

ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯ: ಪ್ರೊ.ಎಸ್.ಆರ್. ನಿರಂಜನ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಲು ವಿಜ್ಞಾನಿಗಳು ಹಾಗೂ ತಂತ್ರಜ್ಞರ ಕೊಡುಗೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ವಿವಿ ದತ್ತಿ ಉಪನ್ಯಾಸ ನಿರ್ವಹಣಾ ಯೋಜನೆ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಪ್ರೊ.ಎಚ್. ಶೇಖರ್ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬಡತನದ ನಿರ್ಮೂಲನೆ ಆಗಲು ವಿಜ್ಞಾನ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಆಗಬೇಕೆಂದು ದೇಶದ ಮೊದಲ ಪ್ರಧಾನಿ ನೆಹರು ಹೇಳಿದ್ದರು. ದೇಶವು ಸಾಕಷ್ಟು ಅಭಿವೃದ್ಧಿ ಸಾಧಿಸಲು ವಿಜ್ಞಾನಿಗಳು ಹಾಗೂ ತಂತ್ರಜ್ಞರ ಕೊಡುಗೆ ಇದೆ. ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಮೂರ್ಖರೊಂದಿಗೆ ವಾದ ಮಾಡಿ ಸಮಯ ವ್ಯರ್ಥ ಮಾಡಬಾರದು. ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೊಡಿಲೆ ಮಾತನಾಡಿ, ಹಸಿರಿನಿಂದ ಕಂಗೊಳಿಸುವ ಸಸ್ಯಗಳೂ ಕೀಟಭಾದೆಯನ್ನು ಎದುರಿಸುತ್ತಿರುತ್ತವೆ. ಆದರೆ, ರೋಗ ನಿರೋಧಕ ಶಕ್ತಿಯನ್ನು ಅವು ಹೊಂದಿದ್ದು, ಪ್ರತಿಯೊಂದು ಸಸ್ಯ ಕೋಶವೂ ಸ್ವಯಂ ರಕ್ಷಿಸಿಕೊಳ್ಳುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ ಎಂದರು.

ರೋಗಭಾದೆಗಳಿಂದ ರಕ್ಷಿಸಿಕೊಳ್ಳುವ ಸಸ್ಯಗಳ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ವಿಜ್ಞಾನ ವಿದ್ಯಾರ್ಥಿಗಳು ಕುತೂಹಲಿಗಳಾಗಬೇಕು. ಅಧ್ಯಯನ ಹಾಗೂ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಮೈಸೂರು ವಿವಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. 15 ದತ್ತಿ ಉಪನ್ಯಾಸ ಸರಣಿ ನಡೆಯುತ್ತಿವೆ. 540 ಚಿನ್ನದ ಪದಕ ಹಾಗೂ 50 ನಗದು ಬಹುಮಾನಗಳನ್ನು ದಾನಿಗಳ ನೆರವಿನಿಂದ ನೀಡಲಾಗುತ್ತಿದೆ ಎಂದರು.

ವಿಜ್ಞಾನ, ತಂತ್ರಜ್ಞಾನ, ಕಲೆ, ವಾಣಿಜ್ಯ ಹಾಗೂ ಕಾನೂನು ವಿಷಯಗಳಲ್ಲಿ ಉಪನ್ಯಾಸಗಳು ನಡೆಯುತ್ತಿವೆ. ಇವು ವರ್ತಮಾನದ ಬೆಳವಣಿಗೆಯ ಬಗ್ಗೆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆ. ನುರಿತ ತಜ್ಞರ ಸಲಹೆ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಸಂಯೋಜಕರಾದ ಪ್ರೊ.ಕೆ.ಎನ್. ಅಮೃತೇಶ್, ಪ್ರೊ.ಎಚ್. ಶೇಖರ್ ಇದ್ದರು.