ನಗರಕ್ಕೆಅರ್ಥ ವ್ಯವಸ್ಥೆಯೇ ಒಂದು ದೇಶದ ಸುಸ್ಥಿರ ಅಭಿವೃದ್ಧಿಯ ಮುಖ್ಯ ಮಾಪನ

| Published : Aug 12 2024, 12:45 AM IST

ನಗರಕ್ಕೆಅರ್ಥ ವ್ಯವಸ್ಥೆಯೇ ಒಂದು ದೇಶದ ಸುಸ್ಥಿರ ಅಭಿವೃದ್ಧಿಯ ಮುಖ್ಯ ಮಾಪನ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಹುಮುಖ್ಯ ಸಮಸ್ಯೆ ಜನಸಂಖ್ಯೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಲವಾದ ಅರ್ಥ ವ್ಯವಸ್ಥೆಯಿಂದಲೇ ಒಂದು ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಇದೇ ಸುಸ್ಥಿರ ಅಭಿವೃದ್ಧಿಯನ್ನು ಅಳೆಯುವ ಬಹುಮುಖ್ಯ ಮಾಪನ ಎಂದು ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ವಿ.ಕೆ. ನಟರಾಜ್ ತಿಳಿಸಿದರು.

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ನಾಲೆಡ್ಜ್ ಪಾರ್ಕ್ ಸೆಮಿನಾರ್ ಹಾಲ್ ನಲ್ಲಿ ಡಾ. ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿಯು ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಅವರು ಪ್ರಗತಿ ಸದಾ ಒಳಿತೇ? ಕುರಿತು ಮಾತನಾಡಿದರು.

ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಹುಮುಖ್ಯ ಸಮಸ್ಯೆ ಜನಸಂಖ್ಯೆ. ದೇಶವು ಇಡೀ ಪ್ರಪಂಚದಲ್ಲೇ ಅಧಿಕ ಜನಸಂಖ್ಯೆ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೃಷಿ, ಆಹಾರ ಪದಾರ್ಥಗಳ ಉತ್ಪಾದನಾ ಮಟ್ಟ ಕುಂಠಿತವಾಗುತ್ತಿದೆ. ಆದ್ದರಿಂದ, ಅಭಿವೃದ್ಧಿ ಸದಾ ಒಳಿತಾಗಿರಬೇಕು. ಅಭಿವೃದ್ಧಿಯು ಇಂದು ಮರೀಚಿಕೆಯಾಗಿದೆ ಎಂದರು.

ಅಭಿವೃದ್ಧಿಯು ಕೇವಲ ಬೆಳವಣಿಗೆ ಮತ್ತು ಜಿಡಿಪಿಯ ಬಗ್ಗೆ ಅಲ್ಲ. ಆದರೆ, ಸಾಮಾಜಿಕ ಮತ್ತು ಪರಿಸರ ಅಂಶಗಳನ್ನು ಒಳಗೊಂಡಿರಬೇಕು. ಇಂದು ಕೃಷಿ, ಹಾಲು ಉತ್ಪಾದನೆ ಕಡಿಮೆಯಾಗಿದೆ. ಜೊತೆಗೆ ಕಚ್ಛಾ ತೈಲಗಳು ದೊರಕುವುದೇ ಕಡಿಮೆಯಾಗಿದೆ. ಸಮಾಜದಲ್ಲಿ ಎಲ್ಲರೂ ಸಮಾನರು, ಆದರೆ ಅಭಿವೃದ್ಧಿ, ಆರ್ಥಿಕತೆ ವಿಚಾರದಲ್ಲಿ ಈ ಮಾತು ಅಕ್ಷರಶಃ ಸುಳ್ಳು ಎಂದು ಅವರು ತಿಳಿಸಿದರು.

ಸಮಾಜ ಸರಳ ಬದುಕು ಅನುಸರಿಸಲಿ

ವಯನಾಡು ದುರಂತ ಅಭಿವೃದ್ಧಿಯನ್ನೇ ತಪ್ಪಿತಸ್ಥ ಸ್ಥಾನದಲ್ಲಿನಿಲ್ಲಿಸಿದೆ. ಅಭಿವೃದ್ಧಿ ಮತ್ತು ಪರಿಸರ ಎರಡನ್ನು ಜೊತೆನಿಲ್ಲಿಸುದಾಗ ಮಹಾತ್ಮ ಗಾಂಧೀಜಿ ಅವರು ಪರಿಸರ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ, ದುರಾಸೆಯನ್ನಲ್ಲ ಎಂಬ ಮಾತು ಇಂದಿಗೂ ಪ್ರಸ್ತುತವಾಗುತ್ತದೆ ಎಂದರು.

ಪರಿಸರ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಮತ್ತು ಸರಳತೆಯಿಂದ ಸಾಗಬೇಕು.ಆದರೆ, ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುವರನ್ನು ಅಭಿವೃದ್ಧಿ ವಿರೋಧಿಗಳಾಗಿ ನೋಡಲಾಗುತ್ತದೆ. ಅದು ಸರಿಯಲ್ಲ. ಸಮಾಜ ಸರಳ ಬದುಕಿಗೆ ಹಿಂದಿರುಗಿ ಹೋಗುವುದೇನೂ ಅಸಾಧ್ಯವಲ್ಲ ಎಂದು ಅವರು ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಾವತಿ, ಪ್ರೊ. ಉಮಾಪತಿ, ಹಿರಿಯ ರಂಗಕರ್ಮಿಗಳಾದ ರಾಮೇಶ್ವರ ವರ್ಮ, ರತ್ನ ಮಿರ್ಲೆ ವಿಶ್ವನಾಥ್, ಇಂದಿರಾ ನಾಯರ್, ಪ್ರೊ. ಪಂಡಿತಾರಾಧ್ಯ, ಪ್ರೊ. ಶಶಿಧರ ಡೊಂಗ್ರೆ, ನಿರಂತರ ಶ್ರೀನಿವಾಸ್ ಪಾಲಹಳ್ಳಿ, ಲಿಂಗರಾಜು, ಡಾ. ರೇಖಾ, ಅರಸೀಕೆರೆ ಯೋಗಾನಂದ್, ಎಸ್.ಜೆ. ಒಂಬತ್ಕೆರೆ, ಪ್ರೊ. ವಸಂತಮ್ಮ, ವಿಜಯಲಕ್ಷ್ಮಿ ಬಸವರಾಜ್ ಕುಟುಂಬದ ಸದಸ್ಯರು ಇದ್ದರು. ಕೀರ್ತಿ ಬಾನು ನಿರೂಪಿಸಿದರು.

----

ಕೋಟ್...

ಪ್ರತಿದಿನ ಸಂವಿಧಾನದ ಬಗ್ಗೆ ಒಬ್ಬರಲ್ಲ ಒಬ್ಬರು ಮಾತಾಡಿಯೇ ಮಾತನಾಡುತ್ತಾರೆ. ಅದು ಇಂದು ಸಾಮಾನ್ಯವಾಗಿದೆ. ಆದರೆ, ದೇಶದ ಅಭಿವೃದ್ಧಿ, ಆರ್ಥಿಕತೆ, ಸಮಸ್ಯೆಗಳ ಕುರಿತು ಮಾತನಾಡುವವರು, ಚಿಂತಿಸುವವರು ಕೆಲವೇ ಕೆಲವು ಜನ. ಇಂದು ದೇಶ ಅಭಿವೃದ್ಧಿಯ ದಿಸೆಯಲ್ಲಿ ನಿಧಾನಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದರೂ ಬಡತನ, ನಿರುದ್ಯೋಗ, ಅಸಮಾನತೆ, ಅನಕ್ಷರತೆಯಂತಹ ಸಮಸ್ಯೆಗಳು ಕಡಿಮೆಯಾಗಿಲ್ಲ.

- ಪ್ರೊ.ವಿ.ಕೆ. ನಟರಾಜ್