ವೃತ್ತಿ ರಂಗಭೂಮಿ ಗ್ರಾಮೀಣ ಪ್ರದೇಶದಲ್ಲಿ ಸದೃಢ

| Published : Sep 25 2025, 01:02 AM IST

ಸಾರಾಂಶ

ರಂಗಭೂಮಿ ಕುರಿತು ಮಹಾರಾಷ್ಟ್ರದಲ್ಲಿ ಒಂದು ಮಾತಿದೆ. ಒಬ್ಬರೇ ಇದ್ದರೆ ನಾಟಕ ನೋಡುತ್ತಾರೆ.

ಮರಿಯಮ್ಮನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ರಂಗಭೂಮಿ ಗಟ್ಟಿಯಾಗಿದೆ. ರಂಗಭೂಮಿ ಎಲ್ಲರನ್ನೂ ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ನಾಟಕಕಾರ, ಹಿರಿಯ ಪತ್ರಕರ್ತ ಗಣೇಶ್‌ ಅಮೀನಗಡ ಹೇಳಿದರು.

ಇಲ್ಲಿನ ದುರ್ಗಾದಾಸ್‌ ಕಲಾಮಂದಿರದಲ್ಲಿ ರಂಗಚೌಕಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.

ರಂಗಭೂಮಿ ಕುರಿತು ಮಹಾರಾಷ್ಟ್ರದಲ್ಲಿ ಒಂದು ಮಾತಿದೆ. ಒಬ್ಬರೇ ಇದ್ದರೆ ನಾಟಕ ನೋಡುತ್ತಾರೆ. ಇಬ್ಬರು ಇದ್ದರೆ ನಾಟಕ ಬಗ್ಗೆ ಚರ್ಚೆ ನಡೆಸುತ್ತಾರೆ. ಮೂವರು ಇದ್ದರೆ ನಾಟಕನೇ ಮಾಡುತ್ತಾರೆ. ಅಂತಹ ಅಭಿರುಚಿನೂ ನಮ್ಮಲ್ಲಿ ಬರಬೇಕಾಗಿದೆ ಎಂದರು.ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ.ನಾಗರತ್ನಮ್ಮ ಸಮಾರೋಪ ನುಡಿಗಳಾಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಸಮಾಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಬಿ.ಎಂ.ಎಸ್‌.ಮೃತ್ಯುಂಜಯ ಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ವಿ.ಪ್ರಾ.ಗ್ರಾ.ಕೃ.ಸ. ಸಂಘದ ಅಧ್ಯಕ್ಷ ಬಿ.ವಿಜಯಕುಮಾರ್‌, ಲಲಿತಕಲಾ ರಂಗದ ಅಧ್ಯಕ್ಷ ಎಚ್‌.ಮಂಜುನಾಥ, ರಂಗಚೌಕಿ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಪುಷ್ಪ ಪಿ. ಸಂಗೀತ ಶಿಕ್ಷಕ ಮಲ್ಲವಿ ಆರ್‌. ಭಟ್‌, ಆರೋಗ್ಯನಿರೀಕ್ಷಣಾಧಿಕಾರಿ ಜಿ. ಸೋಮಶೇಖರ್‌, ಕೆಎಸ್‌ಆರ್‌ಟಿ ಚಾಲಕ ಎಂ.ರಾಮಾಂಜಿನೇಯ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಪುಷ್ಪ ಪಿ. ಸ್ವಾಗತಿಸಿ, ನಿರೂಪಿಸಿದರು. ರಂಗಚೌಕಿ ಕಲಾ ಟ್ರಸ್ಟ್‌ನ ಅಧ್ಯಕ್ಷ ಸರದಾರ ಬಿ. ವಂದಿಸಿದರು.

ನಂತರ ಮೈಸೂರಿನ ಕವಿತಾ ರಂಗ ತಂಡದಿಂದ ಗಣೇಶ್ ಅಮೀನಗಡ ರಚಿಸಿರುವ ಜಗದೀಶ್ ಆರ್. ಜಾಣಿ ನಿರ್ದೇಶನದಲ್ಲಿ ಭಾಗ್ಯಶ್ರೀ ಬಿ. ಪಾಳಾ ಕೌದಿ ನಾಟಕ ಅಭಿನಯಿಸಿದರು.

ನಂತರ ಗೀತಾಮೃತ ಕಲಾ ಟ್ರಸ್ಟ್‌ನಿಂದ ಬಿ.ಎಂ. ಯೋಗೇಶ್‌ ನಿರ್ದೇಶನದ ಮುದಿಕಿ ಮುದುವೆ ನಾಟಕ ಪ್ರದರ್ಶನಗೊಂಡಿತು.

ಮರಿಯಮ್ಮನಹಳ್ಳಿ ದುರ್ಗಾದಾಸ್‌ ಕಲಾಮಂದಿರದಲ್ಲಿ ರಂಗಚೌಕಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಾಟಕಕಾರ, ಹಿರಿಯ ಪತ್ರಕರ್ತ ಗಣೇಶ್‌ ಅಮೀನಗಡ ಮಾತನಾಡಿದರು.