ಉತ್ತಮ ಸಮತೋಲನ ಪಶು ಆಹಾರ ಬಳಸಿ, ಹೈನುಗಾರಿಕೆಯಿಂದ ಲಾಭ ಪಡೆದುಕೊಳ್ಳಬೇಕು.

ಟಿಎಂಎಸ್ ಗೋಸುರಕ್ಷಾ ಪಶು ಆಹಾರ ಬಿಡುಗಡೆ, ಅಡಕೆ ತೋಟದಲ್ಲಿ ಸಮಗ್ರ ಕೃಷಿ ಕುರಿತು ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಶಿರಸಿ

ರೈತರಿಗೆ ಸಾಗಾಟ, ದಾಸ್ತಾನಿಗೆ ಅನುಕೂಲವಾಗಲು ಹೊಸ ವಿನ್ಯಾಸದೊಂದಿಗೆ ಪಶು ಆಹಾರದ 30 ಕೆಜಿ ಚೀಲವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಸಮತೋಲನ ಪಶು ಆಹಾರ ಬಳಸಿ, ಹೈನುಗಾರಿಕೆಯಿಂದ ಲಾಭ ಪಡೆದುಕೊಳ್ಳಬೇಕು ಎಂದು ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ ಹೇಳಿದರು.

ನಗರದ ಟಿಎಂಎಸ್ ಸಭಾಭವನದಲ್ಲಿ ಶಿರಸಿ ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ ಹೊಸ ವಿನ್ಯಾಸದಲ್ಲಿ ಟಿಎಂಎಸ್ ಗೋಸುರಕ್ಷಾ ಪಶು ಆಹಾರ ಬಿಡುಗಡೆ ಹಾಗೂ ಅಡಕೆ ತೋಟದಲ್ಲಿ ಸಮಗ್ರ ಕೃಷಿ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕಳೆದ 20 ವರ್ಷದ ಹಿಂದೆ ಪಶು ವೈದ್ಯರು, ತಜ್ಞರ ಅಭಿಪ್ರಾಯ ಮತ್ತು ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಪಶು ಆಹಾರ ಘಟಕ ಸ್ಥಾಪಿಸಲಾಗಿತ್ತು.‌ 50 ಕೆಜಿ ಚೀಲದ ಜತೆ 30 ಕೆಜಿದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪ್ರಗತಿಪರ ಕೃಷಿ ಸೀತಾರಾಮ ಹೆಗಡೆ ನಿರ್ನಳ್ಳಿ ಮಾತನಾಡಿ, ಪಶು ಸಂಗೋಪನೆಯಲ್ಲಿ ಪಶು ಆಹಾರ ಅಗತ್ಯವಾಗಿದೆ. ರೈತರು ಸಮತೋಲ ಪಶು ಆಹಾರ ಬಳಸಿ, ಹಾಲು ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕ ಲಾಭ ಪಡೆಯಬೇಕು. ಪಶು ಆಹಾರ ತಯಾರಿಕೆಯಲ್ಲಿ ವಸ್ತುಗಳು ತಾಜಾ ಇರಬೇಕು. ಉತ್ತಮ ದರದಲ್ಲಿ ಟಿಎಂಎಸ್‌ನಲ್ಲಿ ತಯಾರಿಸುವ ಪಶು ಆಹಾರ ಅತ್ಯಂತ ಶುದ್ಧವಾಗಿರುತ್ತದೆ. ಸಾವಯುವ ಗೊಬ್ಬರ ಅಧಿಕ ಬಳಕೆಯಿಂದ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂದರು.

ನಿರ್ದೇಶಕ ಎಂ.ಪಿ. ಹೆಗಡೆ ಹೊನ್ನೆಕಟ್ಟು ಮಾತನಾಡಿ, ಟಿಎಂಎಸ್ ಶುದ್ಧ ಪಶು ಆಹಾರ ಪೂರೈಕೆ ಮಾಡುತ್ತಿದೆ. ರೈತರ ಆರ್ಥಿಕ ಹೊರೆ ಕಡಿಮೆ ಮಾಡಲು ಪಶು ಆಹಾತ ತಯಾರಿಸಲಾಗುತ್ತಿದೆ. ಎಲೆಚುಕ್ಕಿ ರೋಗವನ್ನು ಸಗಣಿ ಗೊಬ್ಬರ ಬಳಕೆ ಮಾಡುವುದರಿಂದ ನಿಯಂತ್ರಣ ಸಾಧ್ಯವಿದೆ. ಭೂಮಿಯಲ್ಲಿ ಫಲವತ್ತದೆ ಕಡಿಮೆಯಾಗುತ್ತಿದ್ದು, ಬಾಳೆ, ಏಲಕ್ಕಿ ಬೆಳೆ ನಾಶವಾದರೂ ಅದರ ಬಗ್ಗೆ ಲಕ್ಷ್ಯ ವಹಿಸಿಲ್ಲ. ಈಗ ಎಲೆಚುಕ್ಕೆ ರೋಗ ಬಾಧಿಸುತ್ತಿರುವಾಗ ಎಚ್ಚೆತ್ತುಕೊಂಡಿದ್ದೇವೆ. ಕಳೆದ 20 ವರ್ಷದಿಂದ ಟಿಎಂಎಸ್‌ ಪಶು ಆಹಾರ ಬಳಕೆ ಮಾಡಲಾಗುತ್ತಿದೆ. ಬಹಳ ಉತ್ಕೃಷ್ಟವಾಗಿದೆ. ರೈತರು ಇದರ ಬಳಕೆ ಮಾಡಿದರೆ ಒಳ್ಳೆಯದು ಎಂದರು.

ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸುಧೀಶ ಕುಲಕರ್ಣಿ ಮಾತನಾಡಿ, ದೇಶದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಲೆ ಹೆಚ್ಚು ಹಾಗೂ ನಿರ್ವಹಣೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಅಸಂಪ್ರದಾಯಿಕ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅಂಸಂಪ್ರದಾಯಿಕ ಪ್ರದೇಶದಲ್ಲಿ ಅಡಕೆ ವಿಸ್ತೀರ್ಣವಾಗುತ್ತಿರುವುದರಿದಿಂದ ಬೆಲೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಬೆಳೆಯ ಬೇರು ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿದುಕೊಂಡರೆ ನಿರ್ವಹಣೆಗೆ ಅನುಕೂಲವಾಗುತ್ತದೆ. ಅಡಿಕೆಯಲ್ಲಿ ತಂತು ಬೇರುಗಳು 5 ಅಡಿ ಮಾತ್ರ ಭೂಮಿಯೊಳಗಡೆ ಹೋಗುತ್ತದೆ. ಅದರಲ್ಲಿ ಶೇ.70ರಷ್ಟು 2 ಅಡಿ ದೂರದಲ್ಲಿ ಕಂಡುಬರುತ್ತದೆ. ಗೊಬ್ಬರ ಎಲ್ಲಿ ಹಾಕುವುದು ಎಂಬುದು ಬಹಳ ಪ್ರಾಮುಖ್ಯತೆ. ಗಿಡದಿಂದ 2 ಅಡಿ ದೂರದಲ್ಲಿ ಗೊಬ್ಬರ ಹಾಕುವುದರಿಂದ ಹೀರಿಕೊಳ್ಳಲು ಅನುಕೂಲವಾಗುತ್ತದೆ. ಮಣ್ಣಿನಲ್ಲಿ ರಸಸಾರ ಹೆಚ್ಚಬೇಕಾಗಿರುವುದರಿಂದ ಸುಣ್ಣ ಬಳಕೆ ಹೆಚ್ಚಬೇಕು. ಯಾವ ಪ್ರಮಾಣದಲ್ಲಿ ಪೋಷಕಾಂಶ ನೀಡಬೇಕೆಂಬುದನ್ನು ತಿಳಿಸಿಕೊಳ್ಳಲು 2 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು.

ಟಿಎಂಎಸ್ ನಿರ್ದೇಶಕ ಜಿ.ಎಂ. ಹೆಗಡೆ ಹುಳಗೋಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಹೆಗಡೆ ಮತ್ತಿತರರು ಇದ್ದರು. ಟಿಎಂಎಸ್ ಉಪಾಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸ್ವಾಗತಿಸಿದರು. ರಶ್ಮಿ ಹೆಗಡೆ ಪ್ರಾರ್ಥಿಸಿದರು.