ತೆಪ್ಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಬುಧವಾರ ಮುಂಜಾನೆಯಿಂದಲೇ ವಿವಿಧ ರೀತಿಯ ಧಾರ್ಮಿಕ ಪೂಜಾ ಕೈಂಕರ್ಯ

ಫೋಟೋ- 1ಎಂವೈಎಸ್‌ 65, 66-----------ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಕಪಿಲಾ ನದಿಯ ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರಸ್ವಾಮಿಯವರ ತೆಪ್ಪೋತ್ಸವವು ಸಾವಿರಾರು ಭಕ್ತರ ಹರ್ಷೋದ್ಗಾರ, ಕರತಾಡನದ ನಡುವೆ ವಿಜೃಂಭಣೆಯಿಂದ ನೆರವೇರಿತು. ಕಪಿಲಾ ನದಿಯ ಸ್ನಾನಘಟ್ಟದ ಎರಡು ತೀರದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಶ್ರದ್ದಾ-ಭಕ್ತಿಯಿಂದ ತೆಪ್ಪೋತ್ಸವವನ್ನು ವೀಕ್ಷಿಸಿ ವಿಜೃಂಭಣೆಯ ತೆಪ್ಪೋತ್ಸವಕ್ಕೆ ಸಾಕ್ಷಿಯಾದರು. ಬುಧವಾರ ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥ ಸ್ನಾನದ ಪ್ರಯಕ್ತ ರಾಜ್ಯದ ವಿವಿಧ ಮೂಲೆಯಿಂದ ಆಗಮಿಸಿದ್ದ ಭಕ್ತಾದಿಗಳು ಮುಂಜಾನೆ 4 ಗಂಟೆ ಯಿಂದಲೇ ಕಪಿಲಾನದಿಯಲ್ಲಿ ತೀರ್ಥಸ್ನಾನ ಮಾಡಿ, ಉರುಳುಸೇವೆ, ಧೂಪ, ದೀಪ ಸೇವೆ, ತುಪ್ಪದ ದೀಪ ಸೇವೆಯನ್ನು ಸಲ್ಲಿಸಿ ಬೆಳ್ಳಿ ಹರಕೆ ಪಾದಾರ್ಥಗಳನ್ನು ಹುಂಡಿಯಲ್ಲಿ ಹಾಕಿ ಉದ್ದನೆ ಸರಧಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರನ ದರ್ಶನ ಪಡೆದು ಹರಕೆ ತೀರಿಸಿದರು.ತೆಪ್ಪೋತ್ಸವದ ಅಂಗವಾಗಿ ದೇವಾಲಯದಲ್ಲಿ ಬುಧವಾರ ಮುಂಜಾನೆಯಿಂದಲೇ ವಿವಿಧ ರೀತಿಯ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿಯ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ನಂತರ ರಾತ್ರಿ 7ಕ್ಕೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದೊಡನೆ ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕಪಿಲಾ ನದಿಯ ದಡದಲ್ಲಿನ ಶಾಸ್ತ ಮಂಟಪಕ್ಕೆ ಕರೆತರಲಾಯಿತು. ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹಾಗೂ ಅರ್ಚಕ ವೃಂದ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಶಾಸ್ತ ಮಂಟಪದಲ್ಲಿ ಇರಿಸಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ ವಿದ್ಯುತ್ ದೀಪಾಲಂಕೃತ ತೇಲುವ ದೇವಾಲಯದಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.ಶ್ರೀ ಶ್ರೀಕಂಠೇಶ್ವರಸ್ವಾಮಿಯವರ ಉತ್ಸವಮೂರ್ತಿಯನ್ನು ವಿಶೇಷವಾಗಿ ವಜ್ರದ ಕಂಠಿಹಾರ, ವಜ್ರದ ಕಿರೀಟ ಮತ್ತು ವಜ್ರ-ವೈಡರ್ಯ, ಮುತ್ತು ಹವಳ, ನವರತ್ನಗಳಿಂದ ಶೃಂಗರಿಸಲಾಗಿತ್ತು. ಅಲ್ಲದೆ ನಾನಾ ಬಗೆಯ ವಿಶೇಷ ಹೂಗಳಿಂದ ತೇಲುವ ದೇವಾಲಯವನ್ನು ಅಲಂಕೃತಗೊಳಿಸಲಾಗಿತ್ತು.ಉತ್ಸವ ಮೂರ್ತಿಯನ್ನು ಹೊತ್ತ ವಿದ್ಯುತ್ ದೀಪಾಲಂಕೃತ ತೇಲುವ ದೇವಾಲಯದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಅವರನ್ನು ಮೂರು ಪ್ರದಕ್ಷಿಣೆಯನ್ನು ಹಾಕಲಾಯಿತು. ಒಂದೊಂದು ಪ್ರದಕ್ಷಣೆಯ ಹಾಕುತ್ತಿದ್ದಂತೆ ನದಿಯ ಎರಡೂ ದಡಯಲ್ಲಿ ನೆರದಿದ್ದ ಭಕ್ತರು ಈ ಮನೋಹರ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಕರತಾಡನ, ಜೈ ಶ್ರೀಕಂಠೇಶ್ವರ ಎಂದು ಉದ್ಘೋಷಗಳನ್ನು ಕೂಗಿ ಜೈಕಾರಗಳನ್ನು ಹಾಕಿ ಉತ್ಸವ ಮೂರ್ತಿಯನ್ನು ಶ್ರದ್ಧಾ- ಭಕ್ತಿಯಿಂದ ನಮಿಸಿ ಕಣ್ತುಂಬಿಕೊಂಡು ಭಾವ ಪರವಶರಾಗಿ ಪುಳಕಿತರಾದರು. ಅಲ್ಲದೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಕೋರಿ ಹರಕೆ ಕಟ್ಟಿಕೊಂಡರು.ತೆಪ್ಪೋತ್ಸವ ಒಂದು ಬಾರಿ ಪ್ರದಕ್ಷಿಣೆ ಬರುತ್ತಿದ್ದಂತೆ ಕಪಿಲಾ ನದಿಯ ಹೆಜ್ಜಿಗೆ ಗ್ರಾಮದ ಭಾಗದಲ್ಲಿ ನೆರೆದಿದ್ದ ಭಕ್ತರು ಮತ್ತು ಗ್ರಾಮಸ್ಥರು ಬಾಣ-ಬಿರಸು ಸೇವೆ ನೆರವೇರಿಸಿದರು, ಪಟಾಕಿಯ ಸದ್ದಿಗೆ ಒಳಕಿತರಾಗಿ ಸಂತಸ ಪಟ್ಟರು, ಅಲ್ಲದೆ ಬಾನಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು ಕಂಡು ಸಂತೋಷ ಪಟ್ಟರು.ತೆಪ್ಪೋತ್ಸವದ ಅಂಗವಾಗಿ ಇಂದೂ ಸಹ ವಿವಿಧ ಸಂಘ ಸಂಸ್ಥೆಗಳವರು, ಭಕ್ತಾದಿಗಳು ಪ್ರಸಾದ ವಿನಿಯೋಗ ಮಾಡಿದರು.ಸಂಚಾರ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ತೆಪ್ಪೋತ್ಸವದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂಧೋಬಸ್ತ್ ನಿಯೋಜಿಸಲಾಗಿತ್ತು. ಅಲ್ಲದೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗಿತ್ತು.ದೇವಾಲಯದ ಇಓ ಸಿ. ಜೆ. ಕೃಷ್ಣ, ಎಇಓ ಸತೀಶ್, ದೇವಾಲಯದ ಅರ್ಚಕ ವೃಂದದವರು ಸೇರಿದಂತೆ ಹಲವಾರು ಪ್ರಮುಖರು ಇದ್ದರು.