ಸಹಕಾರ ಸಂಘಗಳಲ್ಲಿ ಸೌಹಾರ್ದತೆ ನೆಲೆಸಿದಲ್ಲಿ ಪ್ರಗತಿ

| Published : Nov 19 2024, 12:46 AM IST

ಸಾರಾಂಶ

ಮೈಸೂರು ಸಂಸ್ಥಾನದ ನಂತರ ಸಹಕಾರ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕರ್ನಾಟಕದಲ್ಲಿ ಪ್ರಗತಿ ಕಂಡಿವೆ. ಸಹಕಾರಿ ಸಂಸ್ಥೆಗಳು ಯಶಸ್ಸು ಕಾಣಲು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೇ ಸೌಹಾರ್ದತೆ ಮುಖ್ಯವಾಗಿದೆ. ಯುವಜನರಿಗೆ ಉದ್ಯೋಗ ದೊರಕಿದಾಗ ಮಾತ್ರ ಆರ್ಥಿಕ ಸಬಲೀಕರಣಕ್ಕೆ ಅರ್ಥ ಬರಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಮಲೇಬೆನ್ನೂರಲ್ಲಿ ಹೇಳಿದ್ದಾರೆ.

- ಮಲೇಬೆನ್ನೂರಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರಪ್ಪ ಉಪನ್ಯಾಸ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮೈಸೂರು ಸಂಸ್ಥಾನದ ನಂತರ ಸಹಕಾರ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕರ್ನಾಟಕದಲ್ಲಿ ಪ್ರಗತಿ ಕಂಡಿವೆ. ಸಹಕಾರಿ ಸಂಸ್ಥೆಗಳು ಯಶಸ್ಸು ಕಾಣಲು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೇ ಸೌಹಾರ್ದತೆ ಮುಖ್ಯವಾಗಿದೆ. ಯುವಜನರಿಗೆ ಉದ್ಯೋಗ ದೊರಕಿದಾಗ ಮಾತ್ರ ಆರ್ಥಿಕ ಸಬಲೀಕರಣಕ್ಕೆ ಅರ್ಥ ಬರಲಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ರಾಮಚಂದ್ರಪ್ಪ ಹೇಳಿದರು.

ಪಟ್ಟಣದ ಸಮುದಾಯ ಭವನದಲ್ಲಿ ಸೋಮವಾರ ಶಿವಮೊಗ್ಗ ಹಾಲು ಒಕ್ಕೂಟ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಒಕ್ಕೂಟ ಹಾಗೂ ತಾಲೂಕಿನ ವಿವಿಧ ಸಹಕಾರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ೭೧ನೇ ಸಹಕಾರ ಸಪ್ತಾಹದಲ್ಲಿ ಅವರು ಉಪನ್ಯಾಸ ನೀಡಿದರು.

ಶಾಸಕ ಬಿ.ಪಿ. ಹರೀಶ್ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಕಾರ್ಯದರ್ಶಿಗಳ ಕಾರ್ಯವೈಖರಿ ಮೇಲೆ ಪ್ರಗತಿ ಎಂಬುದು ಅವಲಂಬಿಸಿದೆ. ನಿವೇಶನವುಳ್ಳ ಸಂಘಗಳ ಕಟ್ಟಡಗಳ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದರು.

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಕ್ಕೂಟದಿಂದ ಒಟ್ಟು ಏಳೂವರೆ ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಮೂರೂವರೆ ಲಕ್ಷ ಲೀ. ಹಾಲನ್ನು ಮಾತ್ರ ಖರೀದಿಸಲಾಗುತ್ತದೆ. ಒಂದು ಕೆ.ಜಿ. ಹಾಲಿನ ಪುಡಿ ತಯಾರಿಕೆಗೆ ₹೩೫೦ ಖರ್ಚಾಗಲಿದೆ. ರೈತರಿಂದ 1 ಲೀ. ಹಾಲು ಖರೀದಿಸಿದರೆ ₹೩೨ ವ್ಯಯವಾಗಲಿದೆ ಎಂದು ಲೆಕ್ಕಾಚಾರಗಳ ತಿಳಿಸಿ, ಒಕ್ಕೂಟದ ಸಾಧನೆ ವಿವರಿಸಿದರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಬಿ.ರಾಮಚಂದ್ರಪ್ಪ ಮಾತನಾಡಿ, ಸ್ವಾತಂತ್ರ್ಯಾನಂತರ ದೇಶಕ್ಕೆ ಉತ್ತಮ ಯೋಜನೆಗಳು ಜಾರಿಯಾಗುತ್ತಿವೆ. ಆದರೆ, ಪ್ರಸ್ತುತ ಸಹಕಾರ ತತ್ವಕ್ಕೆ ದ್ರೋಹ ಬಗೆಯುವ ಜಾತಿ-ಪಕ್ಷಗಳಾಧಾರಿತ ಯೋಜನೆಗಳು ಜಾರಿ ಆಗುತ್ತಿರುವುದು ವಿಷಾದನೀಯ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ₹೧೯೭ ಕೋಟಿ ಕಿಸಾನ್ ಕ್ರಿಡಿಟ್ ಸಾಲ, ₹೨೫ ಕೋಟಿಗಳ ಮಧ್ಯಮಾವಧಿ ಸಾಲ ನೀಡಲಾಗಿದೆ. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅನ್ಯಭಾಷಿಕರು ಕರ್ತವ್ಯ ಮಾಡುತ್ತಿರುವುದರಿಂದ ಸಹಕಾರ ಸಂಸ್ಥೆಗಳ ಆಡಳಿತ ವಿಳಂಬವಾಗುತ್ತಿವೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಶಿಮುಲ್ ನಿರ್ದೇಶಕರಾದ ಜಗದೀಶ್ ಬಣಕಾರ್, ಎಚ್.ಕೆ.ಬಸಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್, ಸಹಕಾರಿ ಮುಖಂಡರಾದ ಪರಮೇಶ್ವರಪ್ಪ, ಗೌಡರ ಮಂಜುನಾಥ್, ಚೇತನ್ ನಾಡಿಗೇರ್, ಸಿದ್ದಮ್ಮ, ಸಹಾಯಕ ನಿಬಂಧಕಿ ಮಂಜುಳಾ, ಯಶೋಧಾ, ಅಭಿವೃದ್ಧಿ ಅಧಿಕಾರಿ ಸುನೀತಾ, ನೌಕರರ ಒಕ್ಕೂಟದ ಕುಮಾರ್, ಆನಂದ್, ವಿಸ್ತರಣಾಧಿಕಾರಿ ಮಂಜುನಾಥ್, ತಾಲೂಕಿನ ಕ್ಷೇತ್ರಾಧಿಕಾರಿಗಳು, ವಿವಿಧ ಕೃಷಿ ಪತ್ತಿನ ಸಂಘಗಳ ನೂರಾರು ಸದಸ್ಯರು ಇದ್ದರು.

- - - -ಚಿತ್ರ1: ಮಲೇಬೆನ್ನೂರಲ್ಲಿ ನಡೆದ ೭೧ನೇ ಸಹಕಾರ ಸಪ್ತಾಹ ಉದ್ಘಾಟನೆಯಲ್ಲಿ ಗಣ್ಯರು ಪಾಲ್ಗೊಂಡರು.

-೧೮ಎಂಬಿಆರ್೧: