ಚನ್ನಪಟ್ಟಣ: ಈ ಬಾರಿಯ ನಗರಸಭೆ ಆಡಳಿತಾವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಒಂದಷ್ಟು ಯೋಜನೆಗಳ ವಿಳಂಬ ಹೊರತುಪಡಿಸಿದರೆ, ನಗರಸಭೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು

ಚನ್ನಪಟ್ಟಣ: ಈ ಬಾರಿಯ ನಗರಸಭೆ ಆಡಳಿತಾವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಒಂದಷ್ಟು ಯೋಜನೆಗಳ ವಿಳಂಬ ಹೊರತುಪಡಿಸಿದರೆ, ನಗರಸಭೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ನಗರದ ಯುಜಿಡಿ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಸಮಸ್ಯೆ ಬಗೆಹರಿದು ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಜಾಗದ ಸಮಸ್ಯೆ ಕೆಳಹಂತದ ನ್ಯಾಯಾಲಯಗಳಲ್ಲಿ ನಮ್ಮ ಪರ ತೀರ್ಪು ಬಂದಿದ್ದು, ಹೈಕೋರ್ಟ್‌ನಲ್ಲಿ ನಮ್ಮ ಪರವಾಗಿಯೇ ತೀರ್ಪು ಬರುವ ನಿರೀಕ್ಷೆ ಇದೆ ಎಂದರು.

ಖಾಸಗಿ ಬಸ್ ನಿಲ್ದಾಣ ಜಾಗದಲ್ಲಿ ಮಾಲ್ ರೀತಿಯಲ್ಲಿ ೧೫೦ ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ೧೦೦ಕೋಟಿ ವಿಶೇಷ ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಿಂದ ಶೇ.೨೫ ಹಣ ಸಿಗಲಿದ್ದು, ಎರಡು ತಿಂಗಳಲ್ಲಿ ಯೋಜನೆ ಆರಂಭಗೊಳ್ಳಲಿದೆ ಎಂದರು.

ನಗರದಲ್ಲಿ ನೀರು ಪೂರೈಕೆಗೆ ಹೊಸದಾಗಿ ಎಂಎಸ್ ಪೈಪ್ ಅಳವಡಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನರಿಗೆ ಶುದ್ಧ ಕಾವೇರಿ ನೀರು ಪೂರೈಸಲು ಕ್ರಮಕೈಗೊಳ್ಳಾಲಾಗಿದೆ ಎಂದರು.

ಇದೇ ವೇಳೆ ಶಾಸಕ ಯೋಗೇಶ್ವರ್‌ ನಗರಸಭೆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಟ್ಟು ಮತ್ತೆ ಚುನಾಯಿತರಾಗಿ ಬರುವಂತೆ ಶುಭಕೋರಿದರು.

ಸಭೆಯಲ್ಲಿ ಪೌರಾಯುಕ್ತ ಮಹೇಂದ್ರ, ಸದಸ್ಯರಾದ ರಫೀಕ್, ಮತೀನ್, ಕೋಟೆ ಚಂದ್ರು, ಶ್ರೀನಿವಾಸ್‌ಮೂರ್ತಿ, ಸುಮಾರವೀಶ್ ಇತರರಿದ್ದರು.

ಬಾಕ್ಸ್‌.......

ನೀರಿನ ಬಿಲ್‌ ದರ ಏರಿಕೆಗೆ ವಿರೋಧ

ಚನ್ನಪಟ್ಟಣ: ಅಮೃತ್-೨ ಯೋಜನೆಯಲ್ಲಿನ ವಿಳಂಬ, ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ನೀರಿನ ಬಿಲ್ ದರ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಕುರಿತು ನಗರಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯ ವಾಸೀಲ್ ಅಲಿಖಾನ್, ನಗರದಲ್ಲಿ ನಡೆಯುತ್ತಿರುವ ಅಮೃತ್-೨ ಯೋಜನೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಲವೆಡೆ ಯೋಜನೆಗಾಗಿ ರಸ್ತೆಗಳನ್ನು ಅಗೆದಿರುವುದು ಸಮಸ್ಯೆಯಾಗಿದೆ. ಕಳೆದ ಎರಡುಮೂರು ಬಾರಿಯಿಂದ ಸಾಮಾನ್ಯಸಭೆ ಬರುವಂತೆ ಅಧಿಕಾರಿಗಳಿಗೆ ಹೇಳುತ್ತಿದ್ದರೂ ಬಂದಿಲ್ಲ. ಇದೀಗ ಅಪೂರ್ಣ ಮಾಹಿತಿಯೊಂದಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಲಿಯಾಕತ್ ಮಾತನಾಡಿ, ನಗರದ ೧೮,೧೯,೨೦ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇದೆ. ಅಮೃತ್-೨ಯೋಜನೆಗಾರಿ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದು, ಇದನ್ನು ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಎಇಇ, ಅಮೃತ್-೨ ಯೋಜನೆಯನ್ನು ೧ರಿಂದ ೮ನೇ ವಾರ್ಡ್‌ವರೆಗೆ ಕೈಗೆತ್ತಿಕೊಂಡಿದ್ದು, ಸರ್ವೇ ಮಾಡಿರುವ ಹಾಗೂ ಯೋಜನೆ ಕೈಗೆತ್ತಿಕೊಂಡಿರುವ ವಾರ್ಡ್‌ಗಳಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

ನೀರಿನ ದರ ಹೆಚ್ಚಳಕ್ಕೆ ಆಕ್ರೋಶ: ನಗರದ ಹಲವಡೆ ನೀರಿನ ಸಮಸ್ಯೆ ಇದೆ. ಕೆಲವೆಡೆ ಪೈಪ್‌ಲೈನ್‌ಗಳು ಒಡೆದುಹೋಗಿದ್ದರೂ ದುರಸ್ತಿಗೊಳಿಸುತ್ತಿಲ್ಲ. ನೀರಿನ ದರ ಏಕಾಏಕಿ ಏರಿಸಿ ಜನರ ಮೇಲೆ ಹೊರೆ ಹಾಕಲಾಗಿದೆ. ನೀರಿನ ಸಮಸ್ಯೆ ಬಗೆಹರಿಸುವವರೆಗೆ ಹಳೇ ದರವನ್ನೇ ನಿಗದಿಪಡಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ನಾಗೇಶ್, ಕಳೆದ ಬಾರಿ ನಡೆದ ಸಾಮಾನ್ಯ ಸಭೆಯಲ್ಲಿಯೇ ಜಲಮಂಡಳಿ ಅಧಿಕಾರಿಗಳು ನೀರಿನ ಬಿಲ್ ದರ ಶೇ.೧೦೦ಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಸಭೆಯಲ್ಲಿ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಶೇ.೫೦ರಷ್ಟು ದರ ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರದ ಹೌಸಿಂಗ್ ಬೋರ್ಡ್‌ ಪಾರ್ಕ್‌ಗೆ ಸೆಕ್ಯೂರಿಟಿ ನೇಮಿಸುವ ಜತೆಗೆ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿ ಪಾರ್ಕ್ ಉಳಿಸಲು ಕ್ರಮಕೈಗೊಳ್ಳುವಂತೆ ಸದಸ್ಯ ಮಂಜುನಾಥ್ ಸಲಹೆ ನೀಡಿದರು.

ಪೊಟೋ೭ಸಿಪಿಟಿ೨:

ಚನ್ನಪಟ್ಟಣದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.