ಸಾರಾಂಶ
ವಿರೋಧಿ ಪಕ್ಷದ ಅಭ್ಯರ್ಥಿ ಯಾರೇ ಇರಲಿ ಕಾರ್ಯಕರ್ತರು ಎಚ್ಚರದಿಂದ ಕೆಲಸ ಮಾಡಬೇಕಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಗ್ರಾಮೀಣ ಮಂಡಲ ಸಭೆಯಲ್ಲಿ ಸಂಸದ ಡಾ. ಉಮೇಶ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆ ಹಾಗೂ ಐದು ವರ್ಷಗಳಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮನೆ ಮನೆಗೆ ಮುಟ್ಟಿಸಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಹೊಂದಲು ಕಾರ್ಯಕರ್ತರು ಮುಂದಾಗಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದರು.ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಮಂಡಲಮಟ್ಟದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಇದು ದೊಡ್ಡ ಚುನಾವಣೆ. ವಿರೋಧಿ ಪಕ್ಷದ ಅಭ್ಯರ್ಥಿ ಯಾರೇ ಇರಲಿ ಕಾರ್ಯಕರ್ತರು ಎಚ್ಚರದಿಂದ ಕೆಲಸ ಮಾಡಬೇಕಾಗಿದೆ. ಕಲ್ಬುರ್ಗಿ ಗ್ರಾಮೀಣ ಮತಕ್ಷೇತ್ರದ ಬೆಡಸೂರಲ್ಲಿ ಹುಟ್ಟಿ ಬೆಳೆದು ಲೋಕಸಭೆಗೆ 2ನೇ ಬಾರಿ ಅಭ್ಯರ್ಥಿಯಾಗಿರುವುದು ಕಾರ್ಯಕರ್ತರ ದುಡಿಮೆಯ ಫಲವಾಗಿದೆ ಎಂದರು.
ಕಲಬುರಗಿಯಲ್ಲೆ 10,000 ಕೋಟಿ ರು. ವೆಚ್ಚದಲ್ಲಿ ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಮೆಗಾ ಜವಳಿ ಪಾರ್ಕ್ ಆರಂಭ, ವಿಮಾನ ನಿಲ್ದಾಣ ಅಭಿವೃದ್ಧಿ, 71 ಕಿ.ಮೀ. ಉದ್ದದ 1475 ಕೋಟಿ ರು. ವೆಚ್ಚದಲ್ಲಿ ಭಾರತ್ ಮಾಲಾ ರಸ್ತೆ, 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರುಣಿಸುವ ಜಲಜೀವನ್ ಮಿಷನ್ ಅಡಿಯಲ್ಲಿ ಸನ್ನತಿ, ಬೆಣ್ಣೆತೋರಾದಿಂದ ನೀರು ಪೂರೈಕೆ, ಬೆಂಗಳೂರಿಗೆ ಎರಡು ರೈಲುಗಳ ಆರಂಭ, ನೀಲೂರು ರೈಲ್ವೇ ಸೇತುವೆ ನಿರ್ಮಾಣ ಹಲವು ರೈಲು ನಿಲ್ದಾಣಗಳ ಅಭಿವೃದ್ಧಿ, ಚಿತಾಪುರದ ಪಾದಾಚಾರಿ ಮೇಲು ಸೇತುವೆ ಆರಂಭ ಇಎಸ್ಐ ಆಸ್ಪತ್ರೆ ಜಿಮ್ಸ್ ನಲ್ಲಿ ಸ್ನಾತಕೋತ್ತರ ಸೀಟುಗಳ ಹೆಚ್ಚಳ ಮುಂತಾದ ನೂರಾರು ಕೆಲಸಗಳನ್ನು ಮಾಡಲಾಗಿದೆ. ಸಂಸತ್ತಿನಲ್ಲಿ ಅತ್ಯಧಿಕ ಹಾಜರಿ, ಅತ್ಯಧಿಕ ಪ್ರಶ್ನೆ ಮಾಡಿದ ಹಾಗೂ ಅತ್ಯಧಿಕ ಚರ್ಚೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಕಲಬುರಗಿ ಸಂಸದನಿಗೆ ಲಭಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಜಾಧವ್ ಹೇಳಿದರು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಬಸವರಾಜ್ ಮತ್ತಿಮಡು ಮಾತನಾಡಿ, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಈಗ ಏಕೈಕ ಬಿಜೆಪಿ ಶಾಸಕನಾಗಿದ್ದು ಕಳೆದ ಬಾರಿಗಿಂತ ಅಧಿಕ 30 ಸಾವಿರ ಮತಗಳ ಮುನ್ನಡೆ ನೀಡಲು ಸಜ್ಜಾಗಿದೆ ಎಂದರು.
ವಿಭಾಜಗೀಯಯ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಾಡಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೆ ಉಸ್ತುವಾರಿ ಸಚಿವರ ಕುಟುಂಬದವರಿಗೆ, ಮೀಸೆ ಚಿಗುರದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಹೀನಾಯ ಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್ ಶೋಭಾ ಬಾಣಿ, ಶಶಿಕಲಾ ತೆಂಗಳಿ, ಸಂತೋಷ್ ಹಾದಿಮನಿ, ಸಂಗಪ್ಪ ಗೌಡ ಪಾಟೀಲ್, ನಿಂಗಣ್ಣ ಹೊಳ್ಕರ್, ಅಶೋಕ್ ಬಗಲಿ ಪ್ರವೀಣ್ ಮಚ್ಚೆಟ್ಟಿ, ಜಗನ್ನಾಥ ಗೌಡ, ದಿನೇಶ್ ಗೌಳಿ ಇದ್ದರು.