ಅಭಿವೃದ್ದಿ ಕಾರ್ಯಕ್ಕೆ ಜನತೆ ಸಹಕರಿಸಿದರೆ ಪ್ರಗತಿ ಸಾಧ್ಯ

| Published : Dec 03 2024, 12:34 AM IST

ಸಾರಾಂಶ

ರಸ್ತೆ ಅಗಲೀಕರಣದಿಂದ ಇಲ್ಲಿನ ಕಟ್ಟಡ ಮಾಲೀಕರಿಗೆ ಜಾಸ್ತಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಳತೆಯನ್ನು ಕಡಿಮೆ ಮಾಡಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ರಸ್ತೆ ಅಭಿವೃದ್ದಿಯಿಂದ ಗ್ರಾಮದ ಕಟ್ಟಡ ಮಾಲೀಕರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಕಾಮಗಾರಿಗೆ ತೊಂದರೆ ಮಾಡಿದರೆ ನಷ್ಟವಾಗುವುದು ವ್ಯಾಪಾರಿಗಳಿಗೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೇಡ, ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಯುವ ಅಭಿವೃದ್ಧಿ ಕೆಲಸಗಳಿಗೆ ಜನರು ಸಹಕರಿಸಿದಾಗ ಮಾತ್ರ ನಿರೀಕ್ಷೆಗೂ ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಾಗುತ್ತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಮಿಟ್ಟೇಮರಿಯ ಗ್ರಾಪಂ ಸಭಾಂಗಣದಲ್ಲಿ ಮಿಟ್ಟೇಮರಿ ಮುಖ್ಯರಸ್ತೆ ಅಭಿವೃದ್ದಿ ವಿಚಾರವಾಗಿ ಕಟ್ಟಡ ಮಾಲೀಕರೊಂದಿಗೆ ಸಭೆ ನಡೆಸಿ ಕಟ್ಟಡ ಮಾಲೀಕರ ಅಹವಾಲುಗಳನ್ನು ಆಲಿಸಿ ಮಾತನಾಡಿ, ಮಿಟ್ಟೇಮರಿ ಹೋಬಳಿ ಕೇಂದ್ರದ ಮುಖ್ಯರಸ್ತೆ ಈಗ ರಾಜ್ಯ ಹೆದ್ದಾರಿಯಾಗಿದೆ. ಅದರ ನಿಯಮಗಳಂತೆಯೇ ರಸ್ತೆಯನ್ನು ಮಾಡಬೇಕಾಗುತ್ತದೆ ಎಂದರು.

ರಸ್ತೆ ವಿಸ್ತೀರ್ಣ ಕಡಿಮೆ ಮಾಡಿದೆ

ಆದರೂ ಸಹ ಇಲ್ಲಿನ ಕಟ್ಟಡ ಮಾಲೀಕರಿಗೆ ಜಾಸ್ತಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಳತೆಯನ್ನು ಕಡಿಮೆ ಮಾಡಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಮುಖ್ಯ ರಸ್ತೆಯ ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡುವುದಲ್ಲದೆ ಗ್ರಾಮದಲ್ಲಿ ಹಾದುಹೋಗುವ ಮುಖ್ಯ ರಸ್ತೆಯನ್ನು ಮಾಧರಿಯನ್ನಾಗಿಸುವ ನಿಟ್ಟಿನಲ್ಲಿ ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಿಸಿ ಬೀದಿದೀಪಗಳನ್ನು ಅಳವಡಿಸಲಾಗುವುದು ರಸ್ತೆ ಅಭಿವೃದ್ದಿ ಕಾಮಗಾರಿ ಮುಗಿದ ನಂತರ ಮಿಟ್ಟೇಮರಿ ಗ್ರಾಮದ ಚಿತ್ರಣವೇ ಬದಲಾಗಿದೆ ಎಂದರು.

ರಸ್ತೆ ಅಭಿವೃದ್ದಿಯಿಂದ ಗ್ರಾಮದ ಕಟ್ಟಡ ಮಾಲೀಕರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದ ಅವರು 1-2 ಅಡಿ ಜಾಗಕ್ಕೆ ಪ್ರತಿಷ್ಠೆಯಿಂದ ಕಾಮಗಾರಿಗೆ ತೊಂದರೆ ಮಾಡಿದರೆ ನಷ್ಟವಾಗುವುದು ನಿಮಗೆ ಎಂಬುದನ್ನು ಮರೆಯಬೇಡಿ. ಉತ್ತಮ ರಸ್ತೆ ನಿರ್ಮಾಣಕ್ಕೆ ಕಟ್ಟಡ ಮಾಲೀಕರ ಸಹಕಾರ ಅಗತ್ಯವಿದೆ, ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ, ಒಣಪ್ರತಿಷ್ಠೆ ಬೇಡ ಎಂದು ಮನವಿ ಮಾಡಿದರು.

ಅಧಿಕಾರಿಗಳಿಗೆ ಸಹಕಾರ ನೀಡಿ

ಅಧಿಕಾರಿಗಳು ಸರ್ಕಾರಿ ನಿಯಮಗಳಂತೆ ರಸ್ತೆ ಕಾಮಗಾರಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು ಪ್ತತಿಯೊಬ್ಬರು ಸಹಕರಿಸಿ ಎಂದ ಅವರು ಅಂಗಡಿಮಾಲೀಕರಿಗೆ ತೊಂದರೆ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಿಭಜಕದಿಂದ ತಲಾ 40 ಅಡಿಗಳಿಗೆ ಚರಂಡಿಯನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಲೋಕೋಪಯೋಗಿ ಎಇಇ ಪ್ರದೀಪ್ ಮಾತನಾಡಿದರು. ಸಭೆಯಲ್ಲಿ ತಾಪಂ ಇಓ ಜಿ.ವಿ.ರಮೇಶ್, ಪೊಲೀಸ್ ಇನ್ಸ್‌ಪೆಕ್ಟ್‌ ಪ್ರಶಾಂತ್ ವರ್ಣಿ, ಮುಖಂಡರಾದ ಪಿ.ಮಂಜುನಾಥರೆಡ್ಡಿ, ನರಸಿಂಹಪ್ಪ, ಕಾಮಿರೆಡ್ಡಿ, ನರಸಿರೆಡ್ಡಿ, ರಾಮರೆಡ್ಡಿ, ಪಿಡಿಒ ವೆಂಕಟೇಶ್ ಮತ್ತಿತರರು ಇದ್ದರು.