ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನಾಪತ್ತೆಯಾದ ಮಕ್ಕಳ ಪ್ರಕರಣಗಳ ಪತ್ತೆ ಕುರಿತು ‘ಕಾಣೆಯಾದ ಮಕ್ಕಳ ವಿಶೇಷ ಕಾರ್ಯಪಡೆ ಸಮಿತಿ’ ಸಭೆಯನ್ನು ಆಯೋಜಿಸಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.ಸಮಿತಿಯ ಅಧ್ಯಕ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಹಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಸಮಿತಿಯು ಪ್ರತಿ ಮಾಹೆ ಸಭೆ ಕರೆದು ಜಿಲ್ಲೆಯಲ್ಲಿ ದಾಖಲಾದ ಮಕ್ಕಳ ಅಪಹರಣ ಮತ್ತು ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಪರಿಶೀಲಿಸುವುದು. ಕಾಣೆಯಾದ ಮಕ್ಕಳ ಪೋಷಕರಿಂದ ಹೆಚ್ಚಿನ ಮಾಹಿತಿ ಪಡೆದು ಮಗುವಿನ ಪತ್ತೆಗೆ ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಆಂದೋಲನ ಆಯೋಜಿಸಿ ಅನುಪಾಲನಾ ವರದಿ ನೀಡುವಂತೆ ಜಿಲ್ಲೆಯಲ್ಲಿನ ಎಲ್ಲಾ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಮಾತನಾಡಿ, ಅಪಹರಣ ಮತ್ತು ಕಾಣೆಯಾದ ಮಕ್ಕಳ ಕಳ್ಳ ಸಾಗಾಣಿಕೆ ಕುರಿತಂತೆ ಸ್ವ-ಸಹಾಯ ಗುಂಪುಗಳು ಹಾಗೂ ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಪೊಲೀಸ್ ಇಲಾಖೆಯು ಮಕ್ಕಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೀಘ್ರವಾಗಿ ಪತ್ತೆ ಮಾಡಿ ಪೋಷಕರ ವಶಕ್ಕೆ ನೀಡುವಂತೆ ತಿಳಿಸಿದರು.
ನೇರವಾಗಿ ಪೋಷಕರಿಗೆ ಸಿಕ್ಕ ಮಕ್ಕಳ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಪೋಷಕರು ತಿಳಿಸಬೇಕು. ಇದರಿಂದ ಕಾಣೆಯಾದ ಮಕ್ಕಳ ಪ್ರಕರಣಗಳನ್ನು ಇತ್ಯರ್ಥ ಮಾಡಲು ಅನುಕೂಲ ಆಗುತ್ತದೆ ಎಂದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಶ್ಮಿ ಮಾತನಾಡಿ, ಕಾಣೆಯಾದ ಮಕ್ಕಳು ಸಾರ್ವಜನಿಕರಿಗೆ ಅಥವಾ ಮಕ್ಕಳ ಸಹಾಯವಾಣಿ, ಪೊಲೀಸರಿಂದ ಬಾಲ ಮಂದಿರಕ್ಕೆ ದಾಖಲಾದ ಮಕ್ಕಳ ಆಪ್ತ ಸಮಾಲೋಚನೆ ನಡೆಸುವುದು. ಮಗುವಿನ ಮಾಹಿತಿಯನ್ನು ಪಡೆದು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಸಂಬಂಧಪಟ್ಟ ಪೋಷಕರ ವಶಕ್ಕೆ ಅಥವಾ ಸಂಬಂಧಪಟ್ಟ ಜಿಲ್ಲೆ ಮತ್ತು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು. ಈ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ನೀಡಿ ಮತ್ತೆ ಮಕ್ಕಳ ಪತ್ತೆ ಕಾರ್ಯ ಮತ್ತು ಪೋಷಕರ ವಶಕ್ಕೆ ನೀಡಲು ಸಹಕರಿಸಲಾಗುತ್ತಿದೆ ಎಂದು ವಿವರಿಸಿದರು.
ಸಮಿತಿ ಸದಸ್ಯರಾದ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ರಾಜಮೂರ್ತಿ, ಶಾಲಾ ಶಿಕ್ಷಣಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಬಾಲ ನ್ಯಾಯ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.