ರಾಗಿಗುಡ್ಡ ಪ್ರದೇಶದಲ್ಲಿ ಮುಂದುವರಿದ ನಿಷೇಧಾಜ್ಞೆ

| Published : Oct 09 2023, 12:45 AM IST

ರಾಗಿಗುಡ್ಡ ಪ್ರದೇಶದಲ್ಲಿ ಮುಂದುವರಿದ ನಿಷೇಧಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಅ.1ರಂದು ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ
ಶಿವಮೊಗ್ಗ: ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಉಂಟಾಗಿದ್ದ ಗಲಭೆ ವಾತಾವರಣ ಇನ್ನೂ ಸಂಪೂರ್ಣವಾಗಿ ತಿಳಿಯಾಗದ ಹಿನ್ನೆಲೆ ರಾಗಿಗುಡ್ಡ ಪ್ರದೇಶದಲ್ಲಿ ಮಾತ್ರ 144 ಸೆಕ್ಷನ್‌ ಮುಂದುವರಿಸಿ ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಅದೇಶ ಹೊರಡಿಸಿದ್ದಾರೆ. ಅ.1ರಂದು ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ರಾಗಿಗುಡ್ಡದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಪೊಲೀಸರು ಲಾಠಿ ಚಾರ್ಜ್‌ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಈಗ ಮುಂಜಾಗ್ರತ ಕ್ರಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದರು. ಈಗ ನಿಷೇಧಾಜ್ಞೆ ಕುರಿತು ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಶಾಂತಿನಗರ – ರಾಗಿಗುಡ್ಡ ಬಡಾವಣೆಗೆ ಮಾತ್ರ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಮುಂದಿನ ಆದೇಶದವರೆಗೆ ರಾಗಿಗುಡ್ಡ – ಶಾಂತಿನಗರದಲ್ಲಿ ಮಾತ್ರ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ. ನಿಷೇಧಾಜ್ಞೆ ಸಂದರ್ಭ ಐದು ಜನರಿಗಿಂತಲು ಹೆಚ್ಚು ಜನರು ಗುಂಪುಗೂಡುವುದು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೆ ಮೆರವಣಿಗೆ, ಪ್ರತಿಭಟನೆ, ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಘೋಷಣೆಗಳನ್ನು ಕೂಗುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಪ್ರಚೋದನಕಾರಿ ಫ್ಲೆಕ್ಸ್‌, ಬಂಟಿಂಗ್ಸ್‌, ಬ್ಯಾನರ್‌ ಕಟ್ಟುವುದನ್ನು ನಿಷೇಧಿಸಲಾಗಿದೆ. ಮಾರಕಾಸ್ತ್ರ, ಸ್ಪೋಟಕ ಹೊಂದುವುದು, ಅವುಗಳನ್ನು ಹಿಡಿದು ಓಡಾಡುವುದನ್ನು ಕೂಡ ನಿಷೇಧಿಸಲಾಗಿದೆ. ಈ ಹಿಂದೆ ಅನುಮತಿ ಪಡೆದಿರುವ ಕಾರ್ಯಕ್ರಮಗಳನ್ನು ಮಾತ್ರ ನಡೆಸಲು ಅನುಮತಿ ಇದೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.