ಗದಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಗೆ ತಡೆ

| Published : Mar 03 2025, 01:46 AM IST

ಸಾರಾಂಶ

ಸಾಕಷ್ಟು ರಾಜಕೀಯ, ಕಾನೂನಾತ್ಮಕ ತಿರುವುಗಳನ್ನು ಪಡೆದುಕೊಂಡಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿತ್ತು. ಅಕ್ರಮವಾಗಿ ಚುನಾವಣೆ ನಡೆಸಿ ಕಾಂಗ್ರೆಸ್, ಕಾನೂನು ಸಚಿವರು ಕಾನೂನು ಬಾಹಿರವಾಗಿ ಅಧಿಕಾರ ಹಿಡಿದಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಾಕ್ಷಿ ಎನ್ನುವಂತೆ ನ್ಯಾಯಾಲಯದ ತಡೆಯಾಜ್ಞೆ ಉಲ್ಲೇಖಿಸಿ ಚುನಾವಣಾಧಿಕಾರಿಗಳೇ ಆಯ್ಕೆ ಘೋಷಣೆಗೆ ತಡೆ ನೀಡಿದ್ದಾರೆ.

ಗದಗ: ಸಾಕಷ್ಟು ರಾಜಕೀಯ, ಕಾನೂನಾತ್ಮಕ ತಿರುವುಗಳನ್ನು ಪಡೆದುಕೊಂಡಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿತ್ತು. ಅಕ್ರಮವಾಗಿ ಚುನಾವಣೆ ನಡೆಸಿ ಕಾಂಗ್ರೆಸ್, ಕಾನೂನು ಸಚಿವರು ಕಾನೂನು ಬಾಹಿರವಾಗಿ ಅಧಿಕಾರ ಹಿಡಿದಿದ್ದಾರೆ ಎನ್ನುವ ಬಿಜೆಪಿ ಆರೋಪಕ್ಕೆ ಸಾಕ್ಷಿ ಎನ್ನುವಂತೆ ನ್ಯಾಯಾಲಯದ ತಡೆಯಾಜ್ಞೆ ಉಲ್ಲೇಖಿಸಿ ಚುನಾವಣಾಧಿಕಾರಿಗಳೇ ಆಯ್ಕೆ ಘೋಷಣೆಗೆ ತಡೆ ನೀಡಿದ್ದಾರೆ.

ಫೆ. 28ರಂದು ಭಾರೀ ಹೈಡ್ರಾಮಗಳ ನಡುವೆ ನಗರಸಭೆ 2ನೇ‌ ಅವಧಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪೂರ್ಣಗೊಂಡಿತ್ತು. ಈ ಚುನಾವಣೆ ಪೂರ್ವದಲ್ಲಿಯೇ ಬಿಜೆಪಿಯ 3 ಜನ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆಯನ್ನೇ ಮುಂದೂಡುವಂತೆ ಒಂದು ಪ್ರಕರಣ, ನಮಗೆ ಮತದಾನದ ಹಕ್ಕು ನೀಡಬೇಕು ಎಂದು ಮತ್ತೊಂದು ಪ್ರಕರಣವನ್ನು ಬಿಜೆಪಿ ದಾಖಲಿಸಿದ್ದರು.

ಗೊಂದಲ: ಫೆ.28ರಂದೇ ಪ್ರಕರಣವನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್‌ ಚುನಾವಣಾ ಪ್ರಕ್ರಿಯೆ ಮುಂದೂಡಿ ಎಂದು ಆದೇಶ ನೀಡಿತ್ತು. ಆದರೆ ಆದೇಶ ಪ್ರತಿ ಚುನಾವಣಾ ಅಧಿಕಾರಿ ಕೈ ಸೇರುವ ಮೊದಲೇ ಚುನಾವಣೆ ಪ್ರಕ್ರಿಯೆ ಮುಗಿಸಿದ್ದರು. ಹೀಗೆ ಕೋರ್ಟ್ ಆದೇಶದ ನಡುವೆಯೂ ಚುನಾವಣೆ ನಡೆಸಿರುವುದನ್ನು ಫೆ.28ರ ಸಂಜೆಯೇ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ವಾದಿಸಿದ್ದರು. ಪ್ರಕರಣದ ತೀವ್ರತೆಯನ್ನು ಅರಿತ ಚುನಾವಣಾಧಿಕಾರಿ ಸಂಜೆಯ ವೇಳೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆ ನೀಡಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಮಾ.5ರಂದು ವಿಚಾರಣೆ: ಚುನಾವಣೆ ಮುಂದೂಡಿದ ಕೋರ್ಟ್ ಆದೇಶ ಪರಿಗಣಿಸದೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ನಡೆಸಿದ್ದಾರೆ. ಕಾನೂನು ಸಚಿವರ ತವರಲ್ಲಿಯೇ ಕಾನೂನು ಪಾಲನೆಯಾಗುತ್ತಿಲ್ಲ ಎಂದು‌ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ‌ ಬಿಜೆಪಿ ಸದಸ್ಯರು ಆರೋಪಿಸಿದ್ದರು.‌ 18 ಜನರು ಕೈ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಿದೆ ಎನ್ನುವ ಹುಮ್ಮಸ್ಸಿನಲ್ಲಿಯೇ ಅಧಿಕಾರ ನಡೆಸಬೇಕು ಅನ್ನುವಷ್ಟರಲ್ಲಿ, ಚುನಾವಣೆ ನಡೆಸಿದ್ದ ಅಧಿಕಾರಿಯೇ ಇದೀಗ, ಫೆ. 28ರಂದು ನಡೆದ ನಗರಸಭೆ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಿದ್ದು ಹಾಗೂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮುಂದಿನ ಅಧಿಕಾರವಧಿ (ಸ್ಥಗಿತಗೊಳಿಸಲಾಗಿದೆ) ತಡೆಹಿಡಿಯಲಾಗಿದೆ ಎಂದು ಆದೇಶ ಹೊರಡಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದರ ವಿಚಾರಣೆ ಮಾ 5ರಂದು ಮತ್ತೆ ನ್ಯಾಯಾಲಯದ ಮುಂದೆ ಬರಲಿದೆ.

ಪತ್ರದಲ್ಲೇನಿದೆ ?: ಉಚ್ಚ ನ್ಯಾಯಾಲಯ ಧಾರವಾಡ ಇವರ ಡಬ್ಲ್ಯೂಪಿ ನಂ.100124/2025 ದಿನಾಂಕ 28-2-2025 ರ ಆದೇಶದಂತೆ, ಉಚ್ಚ ನ್ಯಾಯಾಲಯ ಧಾರವಾಡ ಇವರ ಮುಂದಿನ ಆದೇಶದವರೆಗೆ ಫೆ 28 ರ ಚುನಾವಣೆ ನಡವಳಿಯಂತೆ ಘೋಷಿತ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು/ತಡೆಹಿಡಿಯಲಾಗಿದ್ದು, ಕಾರಣ ಘೋಷಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸದರ ನಗರಸಭೆಯ ಅಧಿಕಾರ ಭಾರ ಮತ್ತು ಯಾವುದೇ ಕಾರ್ಯ ಕಲಾಪಗಳನ್ನು ನಡೆಸದಂತೆ ಈ ಮೂಲಕ ಸೂಚಿಸಿದೆ ಎಂದು ಚುನಾವಣಾ ಅಧಿಕಾರಿ ಗಂಗಪ್ಪ ಎಂ. ಅವರು ನಗರಸಭೆ ನೂತನ ಅಧ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಮತ್ತು ಸಂಬಂಧಿಸಿದವರಿಗೆ ತಿಳಿವಳಿಕೆ ಪತ್ರ ರವಾನಿಸಿದ್ದಾರೆ.

ಆದೇಶ ಮುಚ್ಚಿಟ್ಟಿದ್ದೇಕೆ ?: ಫೆ. 28ರಂದೇ (ಚುನಾವಣೆ ನಡೆದ ದಿನವೇ) ತಿಳಿವಳಿಕೆ ಪತ್ರ ರವಾನೆ ಮಾಡಿರುವ ಚುನಾವಣಾಧಿಕಾರಿಗಳು ಅದನ್ನು ಮುಚ್ಚಿಟ್ಟಿದ್ದು ಏಕೆ ? ಎನ್ನುವ ಪ್ರಶ್ನೆ ಕಾಡುತ್ತಿದೆ. ಚುನಾವಣಾಧಿಕಾರಿಗಳು ಅಂದೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅವರ ಆಯ್ಕೆಗೆ ತಡೆ ನೀಡಿರುವ ಪತ್ರ ನೀಡಿದ್ದರೂ ಮಾ. 1ರಂದು ಜಿಲ್ಲಾಡಳಿತದಿಂದ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಪಾಲ್ಗೊಂಡಿದ್ದು, ಇದು ಜಿಲ್ಲಾಧಿಕಾರಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಗೊತ್ತಿದ್ದರೂ ಸಚಿವರ ಒತ್ತಡಕ್ಕೆ ಮಣಿದು ಸುಮ್ಮನ್ನಿದ್ದರೇ ಎನ್ನುವ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರಿಸಬೇಕಿದೆ.

ಸದ್ಯಕ್ಕೆ ಮುಂದಿನ ವಿಚಾರಣೆ ನಡೆಯುವ ಮಾ. 5ರವರೆಗೂ ನಗರಸಭೆ ನೂತನ‌ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ, ಚುನಾವಣೆ ನಡುವಳಿಕೆ ಕುರಿತು ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಹಾಗೂ ಕರ್ನಾಟಕ ರಾಜ್ಯಪತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಪ್ರಕಟಣೆ ಹೀಗೆ ಈ ಮೂರು ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ. ಚುನಾವಣೆ ಮುಂದೂಡಿದ ಆದೇಶ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ನಮ್ಮ ಕೈ ಸೇರಿದೆ. ಹೀಗಾಗಿ ನಂತರದ ಪ್ರಕ್ರಿಯೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಕೋರ್ಟ್ ಆದೇಶ ನೋಡಿಕೊಂಡು, ಅಧಿಕಾರವಧಿಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಅಲ್ಲಿವರೆಗೂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಗರಸಭೆಯ ಅಧಿಕಾರಭಾರ ಮತ್ತು ಯಾವುದೇ ಕಾರ್ಯ ಕಲಾಪಗಳನ್ನು ನಡೆಸುವಂತಿಲ್ಲ ಹಾಗೂ ಯಾವುದೇ ಪತ್ರಗಳಿಗೆ ಸಹಿ ಹಾಕುವಂತಿಲ್ಲ ಚುನಾವಣಾಧಿಕಾರಿ ಗಂಗಪ್ಪ ಎಂ. ಹೇಳಿದರು.