ಕೆರಗೋಡಿನಲ್ಲಿ ತಣ್ಣಗಾಗದ ಧ್ವಜ ದಂಗಲ್‌

| Published : Feb 01 2024, 02:01 AM IST

ಸಾರಾಂಶ

ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಗ್ರಾಮದಲ್ಲಿ ಭಯದ ವಾತಾವರಣ ನೆಲೆಸಿದೆ. ಧ್ವಜಸ್ತಂಭದ ಬಳಿ ಪೊಲೀಸ್‌ ಸರ್ಪಗಾವಲನ್ನು ಮುಂದುವರಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತೆಯಾಗಿ ಗ್ರಾಮದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಗ್ರಾಮದಲ್ಲಿ ಭಯದ ವಾತಾವರಣ ನೆಲೆಸಿದೆ. ಧ್ವಜಸ್ತಂಭದ ಬಳಿ ಪೊಲೀಸ್‌ ಸರ್ಪಗಾವಲನ್ನು ಮುಂದುವರಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತೆಯಾಗಿ ಗ್ರಾಮದಲ್ಲಿ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.ಈ ಮಧ್ಯೆ, ಪಾದಯಾತ್ರೆ ವೇಳೆ ಕಾಂಗ್ರೆಸ್ ಶಾಸಕನ ಫ್ಲೆಕ್ಸ್ ಹರಿದಿದ್ದ ಆರೋಪದ ಮೇರೆಗೆ 9ನೇ ತರಗತಿಯಲ್ಲಿ ಓದುತ್ತಿರುವ ಕೆರಗೋಡು ಗ್ರಾಮದ ಬಾಲಕನನ್ನು ಕರೆದೊಯ್ದು ಪೊಲೀಸರ ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮುಂಚೆ ಬಾಲಕನ ತಂದೆ ಪಾಪಣ್ಣನನ್ನು ವಿಚಾರಣೆಗೆ ಕರೆದೊಯ್ದು ವಾಪಸ್‌ ಕಳುಹಿಸಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್‌ ನೇತೃತ್ವದ ಬಿಜೆಪಿ ನಿಯೋಗವೊಂದು ಬುಧವಾರ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡವರ ಮನೆಗೆ ಭೇಟಿ ನೀಡಿ, ಅವರ ಯೋಗಕ್ಷೇಮ ವಿಚಾರಿಸಿದರು. ಹಣ್ಣು-ಹಂಪಲುಗಳನ್ನು ನೀಡಿದರು. ಇದೇ ವೇಳೆ, ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರ ಜೊತೆ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಗುರುವಾರದಿಂದ ಹೋರಾಟವನ್ನು ಬೇರೆ ಸ್ವರೂಪಕ್ಕೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದ್ದಾರೆ. ಈ ಮಧ್ಯೆ, ಫೆ.2ರಿಂದ ಮನೆ, ಮನೆಗೆ ಹನುಮಧ್ವಜ ಅಭಿಯಾನ ಆರಂಭಿಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿದ್ದು, ಇದಕ್ಕೂ ಮುನ್ನವೇ ಹನುಮಧ್ವಜ ತೆರವು ವಿರೋಧಿಸಿ ಕೆರಗೋಡು ಗ್ರಾಮದಲ್ಲಿ ಕೇಸರಿಧ್ವಜ ಅಭಿಯಾನ ಆರಂಭವಾಗಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ಕೇಸರಿಧ್ವಜವನ್ನು ಹಾರಿಸುತ್ತಿದ್ದಾರೆ. ಗ್ರಾಮದ ಬಹುತೇಕ ಮನೆಗಳ ಮೆಲೆ ಕೇಸರಿ ಧ್ವಜ ರಾರಾಜಿಸುತ್ತಿದೆ.

ಈ ಮಧ್ಯೆ, ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಶಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಮಾನ ಮನಸ್ಕ ವೇದಿಕೆ, ಫೆ.7 ರಂದು ಮಂಡ್ಯ ಜಿಲ್ಲಾ ಬಂದ್ ಗೆ ತೀರ್ಮಾನಿಸಿದೆ. ಇದೇ ವೇಳೆ ಪೊಲೀಸರ ಕ್ರಮ ಖಂಡಿಸಿ ವಿಶ್ವಹಿಂದು ಪರಿಷತ್‌ ಫೆ.9ಕ್ಕೆ ಮಂಡ್ಯ ಬಂದ್‌ಗೆ ಕರೆ ನೀಡಿದೆ. ಹೀಗಾಗಿ ಮಂಡ್ಯದಲ್ಲಿ 2 ದಿನ ಬಂದ್‌ ನಡೆಯಲಿದೆ.