ಸಾರಾಂಶ
ಯಲ್ಲಾಪುರ: ಜಿಲ್ಲೆಯ ಅತಿಕ್ರಮಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಆಮೂಲಾಗ್ರವಾಗಿ ಚರ್ಚಿಸಿದ್ದೇನೆ. ಈಗಿರುವಂತಹ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಹಳೆ ಅತಿಕ್ರಮಣದಾರರು ಆತಂಕಪಡುವ ಅಗತ್ಯ ಇಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಅರಣ್ಯ ಅತಿಕ್ರಮಣದಾರರು ಮತ್ತು ಸಾರ್ವಜನಿಕರ ಮನವಿಪತ್ರ ಸ್ವೀಕರಿಸಿ ಮಾತನಾಡಿದರು.೨೦೦೬ರಲ್ಲಿ ಅರಣ್ಯ ಅತಿಕ್ರಮಣ ಸಕ್ರಮ ಕಾರ್ಯ ಕಾನೂನು ಜಾರಿಗೆ ಬಂತು. ಆ ಕಾನೂನಿನಲ್ಲಿ ಹಲವು ದೋಶ- ಸಮಸ್ಯೆ ಇರುವುದರಿಂದ ಅತಿಕ್ರಮಣ ಸಕ್ರಮಕ್ಕೆ ಸಾಧ್ಯವಾಗಲಿಲ್ಲ. ಅಂದಿನ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ. ರಾಜ್ಯ ಸರ್ಕಾರ ನಾಲ್ಕೈದು ಬಾರಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿದೆ. ಈಗಲೂ ರಾಜ್ಯ ಸರ್ಕಾರದ ಅಧಿಕಾರಿಗ ಜತೆ ಮಾತನಾಡಿದ್ದೇನೆ. ಪುನಃ ಪ್ರಸ್ತಾವನೆ ಸಲ್ಲಿಕೆಯಾಗಲಿದೆ.
ಪುನಃ ಕೇಂದ್ರ ಅರಣ್ಯ ಸಚಿವರು ಮತ್ತು ಸಮಾಜಕಲ್ಯಾಣ ಸಚಿವರ ಜತೆ ಸೇರಿ ಎಲ್ಲ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸಲು ಪ್ರಯತ್ನಿಸಿಸುತ್ತೇನೆ. ಅತ್ಯಧಿಕ ಅಂತರದ ಗೆಲುವನ್ನು ನೀಡಿದ್ದೀರಿ ನಿಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದ ಅವರು, ಪ್ರಕೃತಿಯ ಅತಿವೃಷ್ಟಿಯ ಹಾನಿಯಿಂದಾಗಿ ಜಿಲ್ಲೆಯಲ್ಲಿ ಶಿರೂರು ಅವಘಡ ಸೇರಿದಂತೆ ನಾನಾ ಕಡೆ ಅಪಾರ ಹಾನಿಯಾಗಿದೆ. ಈ ಕುರಿತು ಸಾಕಷ್ಟು ಪರಿಹಾರ ಕ್ರಮಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ಶನಿವಾರ ಶಿರೂರು ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇನೆ ಎಂದರು.ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೋಂದಿಗೆ ಮಾತನಾಡಿದ ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಅವರು, ಈ ಮೋದಲು ತಂದ ಕಾನೂನಿನಲ್ಲೆ ಸಾಕಷ್ಟು ತೊಡಕಿದೆ. ತೊಡಕಿನ ನಿವಾರಣೆ ಆಗದೆ ಅತಿಕ್ರಮಣ ಸಕ್ರಮ ಸಾಧ್ಯವಿಲ್ಲ. ೮೦- ೯೦ ವರ್ಷ ಹಿರಿಯ ವಯಸ್ಸಿನವರು ಸಾಕ್ಷಿ ಹೇಳುವ ಕಾನೂನು ಬದಲಿಸಿ, ೧೯೮೦ರ ಪೂರ್ವದಲ್ಲಿ ಯಾರೂ ಅತಕ್ರಮಣ ಮಾಡಿದ್ದಾರೋ ಅಂಥವರ ಜಮೀನನನ್ನು ಮಂಜೂರು ಮಾಡಬೇಕು. ಈಗಾಗಲೇ ಜಿಪಿಎಸ್ ಆಗಿದೆ ಇದ್ದಕ್ಕೆ ಯಾವುದೇ ಸಾಕ್ಷಿ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಈ ಕಾನೂನಿನಲ್ಲಿ ಈ ತಿದ್ದುಪಡಿ ಮಾಡಿ ಪುನಃ ಸಮಿತಿ ರಚಿಸಿ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಿದಾಗ ಮಾತ್ರ ಅತಿಕ್ರಮಣ ಸಕ್ರಮ ಸುಲಭದಲ್ಲಿ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಜಿಲ್ಲಾ ಸಮಿತಿ ಸದಸ್ಯ ಉಮೇಶ ಭಾಗ್ವತ, ತಾಲೂಕು ಕಾರ್ಯದರ್ಶಿ ನಟರಾಜ ಗೌಡರ್ ಸೇರಿದಂತೆ ಅನೇಕ ಮುಖಂಡರು, ರೈತರು ಉಪಸ್ಥಿತರಿದ್ದರು.ರೈತರ ಪರವಾಗಿ ಮಲವಳ್ಳಿಯ ರಸ್ಮಾ ಕುಣಬಿ, ಕಿರವತ್ತಿಯ ದೊಂಡು ಪಾಟೀಲ ಅತಿಕ್ರಮಣದ ಸ್ಥಿತಿಗತಿಯ ಕುರಿತು ಸಂಸದರಿಗೆ ಮನವಿ ನೀಡಿ ಹಿಂದಿನ ಕಾನೂನಿನ ಕುರಿತು ತಿಳಿಸಿದರು.