ಸರ್ಕಾರದ ಅವಾಂತರದಿಂದ ಯೋಜನೆಗಳು ಸ್ಥಗಿತ

| Published : Oct 08 2024, 01:10 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯಲ್ಲಿರುವ 40ಕ್ಕೂ ಹೆಚ್ಚು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಾಂತರದಿಂದ ಸ್ಥಗಿತವಾಗುವ ಹಂತಕ್ಕೆ ಬಂದಿವೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯಲ್ಲಿರುವ 40ಕ್ಕೂ ಹೆಚ್ಚು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಾಂತರದಿಂದ ಸ್ಥಗಿತವಾಗುವ ಹಂತಕ್ಕೆ ಬಂದಿವೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಬಹುಹಳ್ಳಿ ಯೋಜನೆಗಳನ್ನು ಯಶಸ್ವಿಗೊಳಿಸಲು ನಿಯೋಜಿಸಿದ ಗುತ್ತಿಗೆದಾರರಿಗೆ ಈಗಿರುವ ಸರ್ಕಾರ ಹಣ ಪಾವತಿ ಮಾಡಿಲ್ಲ. ಹಣ ಬಾರದ ಹಿನ್ನೆಲೆ ಅವರೆಲ್ಲ ಅ.4ರಿಂದಲೇ ಕೆಲಸ ನಿಲ್ಲಿಸಿದ್ದಾರೆ. ಪ್ರತಿ ಸ್ಕೀಂ ನಲ್ಲಿಯೂ ಕಳೆದ 18 ತಿಂಗಳಿನಿಂದ ಹಣ ಪಾವತಿಸಿಲ್ಲ. ಗುತ್ತಿಗೆದಾರರು ಕೈಯಿಂದ ಹಣಹಾಕಿ ಕೆಲಸ ಮಾಡಿದ್ದಾರೆ. ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಮೇಲಿಂದ ಮೇಲೆ ಪತ್ರದ ಮೂಲಕ ಬರೆದರೂ ಪ್ರಯೋಜನವಾಗಿಲ್ಲ. ಸರ್ಕಾರ ತಕ್ಷಣ ಗುತ್ತಿಗೆದಾರರ ಮನವಿಗೆ ಸ್ಪಂದಿಸಬೇಕು. ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು ₹ 35ಕೋಟಿ ವರೆಗೆ ಗುತ್ತಿಗೆದಾರರ ಬಿಲ್ ಆಗಿಲ್ಲ. ಜಿಲ್ಲೆಯಲ್ಲಿ ಗುತ್ತಿಗೆದಾರರ ಬಳಿ 800 ರಿಂದ 1000 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ಸಂಬಳ‌ ಕೊಡಲು ಆಗುತ್ತಿಲ್ಲ ಎಂದು ಗುತ್ತಿಗೆದಾರರು ಗೋಳಾಡುತ್ತಿದ್ದಾರೆ ಎಂದು ಹೇಳಿದರು.

ನೀರಿನ ಸಮರ್ಪಕ ನಿರ್ವಹಣೆಗೆ ಅಲಂ, ಬ್ಲೀಚಿಂಗ್ ಪೌಡರ್, ಕ್ಲೋರಿನ್ ನಂತಹ ವಸ್ತುಗಳನ್ನು ಗುತ್ತಿಗೆದಾರರು ತಮ್ಮ ಸ್ವಂತ ಖರ್ಚಿನಿಂದಲೇ ಹಾಕಿ ಜನರಿಗೆ ಕುಡಿಯಲು ನೀರು ಕೊಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಈ ಯೋಜನೆ ಬಂದ್ ಆಗಲಿದೆ. ಆಗ ರಾಜ್ಯ ಸರ್ಕಾರಕ್ಕೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರಾಸಕ್ತಿ ವಹಿಸಿದರೆ, ಸಮಸ್ಯೆ ಪರಿಹರಿಸುವ ಮನಸ್ಸು ಇಲ್ಲದಿದ್ದರೆ ರಾಜ್ಯ ಸರ್ಕಾರ ಸಂಪುಟವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಗೆ ದಾರಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೊಳ್ಳಿ, ಉಪಾಧ್ಯಕ್ಷ ಡಿ.ಜಿ.ಬಿರಾದಾರ ಉಪಸ್ಥಿತರಿದ್ದರು.--

ಚಿತ್ರ: 06BIJ01

ಕೋಟ್‌

ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು ₹ 35ಕೋಟಿ ವರೆಗೆ ಗುತ್ತಿಗೆದಾರರ ಬಿಲ್ ಆಗಿಲ್ಲ. ಜಿಲ್ಲೆಯಲ್ಲಿ ಗುತ್ತಿಗೆದಾರರ ಬಳಿ 800 ರಿಂದ 1000 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಿಗೆ ಸಂಬಳ‌ ಕೊಡಲು ಆಗುತ್ತಿಲ್ಲ ಎಂದು ಗುತ್ತಿಗೆದಾರರು ಗೋಳಾಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ, ರಾಜ್ಯ ಸರ್ಕಾರ ಸಂಪುಟವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಗೆ ದಾರಿ ಮಾಡಿಕೊಡಬೇಕು.

ಗುರುಲಿಂಗಪ್ಪ ಅಂಗಡಿ, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ