ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಉತ್ತೇಜನ

| Published : Aug 14 2024, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಪ್ರಚಾರದಲ್ಲಿ ಹಿಂದೆ ಬಿದ್ದಿರುವುದು ಕಳವಳಕಾರಿ ಸಂಗತಿ. ಈ ಭಾಗದ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿಯೂ ಗುರುತಿಸುವಂತೆ ಉತ್ತೇಜನ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಪ್ರಚಾರದಲ್ಲಿ ಹಿಂದೆ ಬಿದ್ದಿರುವುದು ಕಳವಳಕಾರಿ ಸಂಗತಿ. ಈ ಭಾಗದ ಪ್ರವಾಸಿ ತಾಣಗಳನ್ನು ಜಾಗತಿಕ ಮಟ್ಟದಲ್ಲಿಯೂ ಗುರುತಿಸುವಂತೆ ಉತ್ತೇಜನ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ ಹೇಳಿದರು

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಬೆಳಗಾವಿಯ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ಮಧ್ಯಸ್ಥಿಕೆದಾರರೊಂದಿಗೆ ಜರುಗಿದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೆಳಗಾವಿ ಹತ್ತಿರದ ಚನ್ನಮ್ಮನ ಕಿತ್ತೂರು, ನಂದಗಡ, ರಾಜಹಂಸಗಡ ಸೇರಿ ಅನೇಕ ಪ್ರವಾಸಿ ತಾಣಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕು. ಈ ಭಾಗದ ಜನರ ಧೈರ್ಯ, ಕಾರ್ಯಕ್ಷಮತೆ ಹಾಗೂ ನೈಸರ್ಗಿಕ ಸಂಪತ್ತುಗಳ ಕುರಿತು ಜಾಗೃತಿ ಮೂಡಿಸಬೇಕು. ಖಾನಾಪುರ ಭಾಗದ ಅರಣ್ಯ ಪ್ರದೇಶ ತೀರ್ಥಹಳ್ಳಿಯ ಕಾಡಿಗಿಂತ ದಟ್ಟವಾಗಿದೆ. ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿ ಚಾರಣಿಗರನ್ನು ಆಕರ್ಷಿಸುವ ಕಾರ್ಯವಾಗಬೇಕಾಗಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇರುವ ಪೂರಕ ಅಂಶಗಳನ್ನು ಗುರುತಿಸಿ ಅವುಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಭಾಗದ ಹೋಟೆಲ್‌, ವಾಹನ ಮಾಲೀಕರು, ಚಾಲಕರು ಪ್ರವಾಸಿಗರೊಂದಿಗೆ ಗೌರವಯುತವಾಗಿ ನಡೆದುಕೊಂಡಲ್ಲಿ ಆ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರವಾಸೋದ್ಯಮ ಎಂದರೆ ಕೇವಲ ಹೋಟೆಲ್‌ ಗಳ ನಿರ್ಮಾಣ ಮಾತ್ರವಲ್ಲ, ಸ್ಥಳೀಯ ಆಹಾರ ಪದಾರ್ಥಗಳಿಂದಲೂ ಪ್ರವಾಸೋದ್ಯಮ ಉತ್ತೇಜಿಸಬಹುದಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯಿಂದ ಶೀಘ್ರವೇ ಕ್ರಮ ವಹಿಸಲಾಗುವುದು. ೨೦೨೪-೨೦೨೯ರ ವರೆಗಿನ ಕರ್ನಾಟಕ ಪ್ರವಾಸೊದ್ಯಮ ಕರಡು (ನೀತಿ)ಯನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಪ್ರವಾಸೊದ್ಯಮ ಮಧ್ಯಸ್ಥಿಕೆದಾರರ ಸಲಹೆ ಸೂಚನೆಗಳನ್ನು ಪರಿಗಣಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯದಲ್ಲಿ ಮಧ್ಯಸ್ಥಿಕೆದಾರರು ಭಾಗವಹಿಸುವುದು ಅತೀ ಮುಖ್ಯವಾಗಿದೆ ಎಂದು ಕೆ.ವಿ.ರಾಜೇಂದ್ರ ತಿಳಿಸಿದರು.

ಸಂವಾದಲ್ಲಿ ಪಾಲ್ಗೊಂಡಿದ್ದ ವಿವಿಧ ಹೋಟೆಲ್ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಹಳೆಯ ಪಾಲಿಸಿ ಪ್ರಕಾರ ಹೋಂ ಸ್ಟೇಗಳಲ್ಲಿ ಇರುವ ಐದು ಕೋಣೆಗಳ ಮಿತಿಯನ್ನು ಹತ್ತು ಕೋಣೆಗಳಿಗೆ ವಿಸ್ತರಿಸಬೇಕು. ಜಿಲ್ಲೆಗೆ ಆಗಮಿಸುವ ಬೇರೆ ರಾಜ್ಯಗಳ ಪ್ರವಾಸಿಗರೊಂದಿಗೆ ಪೊಲೀಸ್ ಇಲಾಖೆ ಸಿಬ್ಬಂದಿ ಗೌರವಯುತವಾಗಿ ನಡೆದುಕೊಳ್ಳುವುದರ ಕುರಿತು ಚರ್ಚಿಸಿದರು.

ಬೆಳಗಾವಿಯ ಕಮಲ ಬಸದಿ, ಸುವರ್ಣಸೌಧ ಸೇರಿದಂತೆ ಅನೇಕ ಪ್ರೇಕ್ಷಣಿಯ ಸ್ಥಳಗಳಿದ್ದು, ಇವುಗಳ ಕುರಿತು ಪ್ರಚಾರ ಮಾಡುವುದರ ಜೊತೆಗೆ ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಟೆಲ್‌ಗಳನ್ನು ದಾಖಲಿಸುವ ಕುರಿತು ಇರುವ ಪ್ರಕ್ರಿಯೆ ಸರಳೀಕರಣ, ಜಲಕ್ರೀಡೆಗಳಿಗೆ ಅನುಮತಿ, ಕಿತ್ತೂರು ರಾಣಿ ಚನ್ನಮ್ಮ ಜನ್ಮಸ್ಥಳ ಅಭಿವೃದ್ಧಿ ಕುರಿತು ಸಲಹೆ ಹಾಗೂ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಹಾಗೂ ಬೋರ್ಡ್‌ನ ನಿರ್ದೆಶಕ ಪಿ.ಸಿ.ರಾವ್, ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ, ಹೋಟೆಲ್ ಉದ್ಯಮಿ ವಿಠ್ಠಲ ಹೆಗಡೆ ಸೇರಿ ವಿವಿಧ ಹೋಟೆಲ್ ಮಾಲೀಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

---------------------------

ಕೋಟ್‌

ಬೆಂಗಳೂರಿನಿಂದ ಮುಂಬೈಗೆ ಕೈಗಾರಿಕೆ ಉದ್ದೇಶದಿಂದ ಉದ್ಯಮಿಗಳು ಈ ಮಾರ್ಗವಾಗಿಯೇ ಪ್ರವಾಸ ಕೈಗೊಳ್ಳುತ್ತಾರೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಅನುಕೂಲವಿದೆ. ಈ ಭಾಗದ ಕೃಷಿ ಪ್ರವಾಸೋದ್ಯಮ ಜೊತೆಗೆ ಗ್ರಾಮೀಣ ಭಾಗದಲ್ಲಿ ಅನೇಕ ಉತ್ಪನ್ನಗಳಿಂದಲೂ ಪ್ರವಾಸೊದ್ಯಮಕ್ಕೆ ಉತ್ತೇಜನ ನೀಡಬಹುದಾಗಿದೆ. ಈ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಹಾಗೂ ಪ್ರಚಾರ ಮಾಡುವುದು ಮುಖ್ಯವಾಗಿದೆ.

- ಡಾ.ಕೆ.ವಿ.ರಾಜೇಂದ್ರ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ