ಸಿಡಿಲಿಗೆ ಬಲಿಯಾದವರ ಕುಟುಂಬಕ್ಕೆ ತ್ವರಿತ ಪರಿಹಾರಕ್ಕೆ ಸೂಚನೆ

| Published : May 14 2025, 12:00 AM IST

ಸಿಡಿಲಿಗೆ ಬಲಿಯಾದವರ ಕುಟುಂಬಕ್ಕೆ ತ್ವರಿತ ಪರಿಹಾರಕ್ಕೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಡಿಲು ಮುನ್ಸೂಚನೆ ನೀಡುವ ಆ್ಯಪ್‌ಗಳು ಬಂದಿದ್ದು, ಮೊಬೈಲ್ ಬಳಕೆ ಮಾಡುತ್ತಿರುವ ಪ್ರತಿಯೊಬ್ಬರೂ ಈ ಆ್ಯಪ್‌ಗಳ ಬಳಕೆ ಮಾಡಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರು ಮನವಿ ಮಾಡಿದ್ದಾರೆ.

ಹಾವೇರಿ: ಸಿಡಿಲು ಬಡಿದು ಸೋಮವಾರ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬದವರಿಗೆ ತ್ವರಿತವಾಗಿ ಪರಿಹಾರ ವಿತರಣೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅನ್ವಯ ತಕ್ಷಣ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಸಿಡಿಲು ಮುನ್ಸೂಚನೆ ನೀಡುವ ಆ್ಯಪ್‌ಗಳು ಬಂದಿದ್ದು, ಮೊಬೈಲ್ ಬಳಕೆ ಮಾಡುತ್ತಿರುವ ಪ್ರತಿಯೊಬ್ಬರೂ ಈ ಆ್ಯಪ್‌ಗಳ ಬಳಕೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಸಿಡಿಲಿನ ಮುನ್ಸೂಚನೆ ಬರುತ್ತಿದ್ದಂತೆ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ಈ ಆ್ಯಪ್‌ಗಳ ಬಳಕೆ ಮಾಡಬೇಕು. ಈಗಾಗಲೇ ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ನೀಡಿದ್ದು ಪಾಲನೆ ಮಾಡುವುದು ಒಳಿತು ಎಂದು ಸಚಿವರು ತಿಳಿಸಿದ್ದಾರೆ. ಮಳೆ- ಗಾಳಿಗೆ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಮುರಿದು ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಬೇಕು. ತುಂಡಾಗಿ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಕಳೆದ ವರ್ಷ ಮಳೆಗಾಲದಲ್ಲಿ ಮರ ಬಿದ್ದು ಬೈಕ್ ಸವಾರರು ಮೃತಪಟ್ಟ ಹಾಗೂ ಹಾವೇರಿಯಲ್ಲಿ ಬಾಲಕ ಚರಂಡಿಯಲ್ಲಿ ಕೊಚ್ಚಿ ಹೋದ ದುರ್ಘಟನೆಗಳನ್ನು ನೆನಪಿಸಿರುವ ಸಚಿವರು, ಇಂತಹ ದುರಂತಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.ನಗರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಛತೆ ಮಾಡಿಸಬೇಕು. ಹಾಗೂ ಚರಂಡಿಗಳ ಮೇಲೆ ಹಾಕಿರುವ ಕಲ್ಲುಗಳನ್ನು ದುರಸ್ತಿಗಾಗಿ ತೆಗೆದಿದ್ದರೆ ತಕ್ಷಣ ಮುಚ್ಚಬೇಕು ಎಂದು ಸೂಚನೆ ನೀಡಿದ್ದಾರೆ.

ಹಿರೇಕೆರೂರಲ್ಲಿ ಭರ್ಜರಿ ಮಳೆ

ಹಿರೇಕೆರೂರು: ತಾಲೂಕಿನದ್ಯಾಂತ ಮಂಗಳವಾರ ಸಂಜೆ 4 ಗಂಟೆಯಿಂದ ಭಾರಿ ಮಳೆ ಸುರಿದಿದೆ.

ಬೆಳಗ್ಗೆಯಿಂದ ಮೋಡ ಕವಿದ ವಾತಾರಣವಿತ್ತು. ಕೆಲವು ಗಂಟೆ ಬಿಸಿಲಿತು. ಸಂಜೆಯಾಗುತ್ತಿದಂತೆಯೆ ಮಳೆ ಸುರಿಯಿತು. ಬಿಸಿಲಿನ ಬೇಗೆಗೆ ಬೇಯುತ್ತಿದ್ದ ಜನರಿಗೆ ತಂಪು ಎರೆದಂತಾಗಿದೆ. ಅದೇ ರೀತಿ ಚಿಕ್ಕೆರೂರು, ಹಂಸಭಾವಿ, ಕೋಡ, ಹೋಬಳಿ ಸುತ್ತ ಮಳೆ ಸುರಿದಿದೆ. ಕೆಲವು ರೈತರು ಬೇಸಿಗೆಯಲ್ಲಿ ಬೆಳೆದ ಗೋವಿನ ಜೋಳದ ಬೆಳೆ ನೆಲಕಚ್ಚಿದೆ.