ಕನಕಪುರ: ಗ್ರಾಮದ ಕೆಲವರು ತಪ್ಪು ಮಾಹಿತಿ ಹರಡುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಹಾಗೂ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಯದುನಂದನ್ ಗೌಡ ಆರೋಪಿಸಿದರು

ಕನಕಪುರ: ಗ್ರಾಮದ ಕೆಲವರು ತಪ್ಪು ಮಾಹಿತಿ ಹರಡುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಹಾಗೂ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಯದುನಂದನ್ ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸಾತನೂರು ಹೋಬಳಿ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಕಾನೂನು ಬದ್ದವಾಗಿ ನಾವು ತೆಗೆದುಕೊಂಡಿರುವ ನಮ್ಮ ಜಮೀನನ್ನು ಸ್ವಚ್ಛಗೊಳಿಸಿದ್ದನ್ನು ಸಹಿಸದ ಗ್ರಾಮದ ಕೆಲವರು ಮಾಧ್ಯಮಗಳ ಮೂಲಕ ನಮ್ಮನ್ನು ರೌಡಿಗಳಂತೆ ಬಿಂಬಿಸಿರುವುದು ವೈಯಕ್ತಿಕವಾಗಿ ನೋವು ತಂದಿದೆ. ಅಚ್ಚಲು ನವಾಬ ಸಾಹೇಬರ ಅಧೀನದಲ್ಲಿದ್ದ ಒಟ್ಟು 19 ಸರ್ವೆ ನಂ.ಗಳ 140 ಎಕರೆ ಜಮೀನನ್ನು 1987ರ ಆದೇಶದನ್ವಯ ಎಲ್‌ಆರ್‌ಎಫ್‌ ಕಾಯ್ದೆ ಪ್ರಕಾರ ಸರ್ವೇ ನಂ 269, 271,274,348,349ರಲ್ಲಿ ಸರ್ಕಾರದ ಆದೇಶದಂತೆ 36 ಎಕರೆ ಜಾಗವನ್ನು ಗ್ರಾಮದ 28 ನಿವಾಸಿಗಳಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಲಹೆ, ಸೂಚನೆಯಂತೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಜಾಗದ ವಿಷಯವಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದ್ದು, ಸತ್ತವರ ಹೆಸರಿನಲ್ಲಿ ಹೇಳಿಕೆ ಕೊಡಿಸಿರುವುದು ಹಾಸ್ಯಸ್ಪದವಾಗಿದೆ. ನಾವು ತೆಗೆದುಕೊಂಡಿರುವ ಜಮೀನಿಗೂ ಎಲ್‌ಆರ್‌ಎಫ್‌ ಜಮೀನಿಗೂ ಸಂಬಂಧವಿಲ್ಲ. ಈ ಪ್ರಕರಣ ಈಗಾಗಲೇ ಉಚ್ಚ ನ್ಯಾಯಾಲಯದಲ್ಲಿ ವಜಾ ಆಗಿ ಪರಸ್ಪರ ಹೊಂದಾಣಿಕೆಯಿಂದ ಗ್ರಾಮಸ್ಥರಿಗೆ ಎಸಿ /ಡಿಸಿ ಮೂಲಕ ನ್ಯಾಯ ಒದಗಿಸುವಂತೆ ಆದೇಶ ನೀಡಿರುವುದನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿ ನಮ್ಮ ತೇಜೋವಧೆಗೆ ಯತ್ನಿಸಲಾಗುತ್ತಿದೆ ಎಂದರು.

ಎಲ್‌ಆರ್‌ಎಫ್‌ ಅನ್ವಯ ಒಂದು ಕುಂಟೆ ಜಾಗವನ್ನು ನಾನಾಗಲೀ,ಶಾಸಕ ಇಕ್ಬಾಲ್ ಹುಸೇನ್ ಆಗಲೀ ಒತ್ತುವರಿ ಮಾಡಿಕೊಂಡಿಲ್ಲ. ಗ್ರಾಮಸ್ಥರ ಒತ್ತಾಯದ ಮೇರೆಗೆ ನವಾಬ್ ಸಾಹೇಬರು ಜಿಪಿಎ ಮಾಡಿಕೊಟ್ಟ ನಂತರ ಗ್ರಾಮದ 1987ರ ಆದೇಶದಂತೆ ಎಲ್‌ಆರ್‌ಎಫ್‌ 36 ಎಕರೆ ಜಾಗ ಸೇರಿದಂತೆ ನಮಗೆ 2024/25ರಲ್ಲಿ ಜಿಪಿಎ ಆಗಿರುವ ಸರ್ವೆ ನಂ. 66 /68 /70 ರಲ್ಲಿ13.5 ಎಕರೆ ಜಮೀನಿನನ್ನು ಗ್ರಾಮದ ರಸ್ತೆ, ದೇವಾಲಯ, ಶಾಲೆಗೆ ಬಿಟ್ಟು ಕೊಡಲಾಗಿದೆ. ಜೊತೆಗೆ ಗ್ರಾಮದ 124 ಮನೆಗಳನ್ನು ಅವರ ಹೆಸರಿಗೆ ಬರೆಸಿಕೊಟ್ಟು ಪಹಣಿ ಮಾಡಿಸಿಕೊಡಲಾಗಿದೆ. 24 ಜನರಿಗೆ 3 -5 ಕುಂಟೆ ಜಮೀನನ್ನ ಅವರ ಹೆಸರಿಗೆ ಮಾಡಿಕೊಟ್ಟು 9/11 ನೀಡಿ ಈ ಜಾಗಗಳ ಕಂದಾಯದ ಹಣ ನಾವೇ ಸಂದಾಯ ಮಾಡುತ್ತಿದ್ದು ಅದಷ್ಟೂ ಬೇಗ ಜಾಗದ ಹಕ್ಕು ಪತ್ರ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸುರೇಶ್, ಜವರೇಗೌಡ, ಶಿವಣ್ಣ, ಪ್ರಕಾಶ್, ಕನಕರಾಜು, ನಂಜೇಗೌಡ, ಜಯರತ್ನಮ್ಮ, ಚೇತನ್, ಲೋಕೇಶ್, ರಾಜು,ಮಲ್ಲೇಶ್, ಮಧು,ಚಿಕ್ಕಣ್ಣ, ಸುನೀಲ್, ಆನಂದ್, ಮಹದೇವ್ ಇತರರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರ ತಾಲೂಕಿನ ಹೊಂಗಾಣಿದೊಡ್ಡಿ ಜಮೀನು ಕುರಿತು ಕಾಂಗ್ರೆಸ್‌ ಮುಖಂಡ ಯದುನಂದನ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.