ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರಬರಲು ಸರಿಯಾದ ಯೋಜನೆ ಮತ್ತು ನಿರಂತರ ಪರಿಶ್ರಮ ಅಗತ್ಯವೆಂದು ಖ್ಯಾತ ನಟ ಹಾಗೂ ನಿರ್ಮಾಪಕರಾದ ರಕ್ಷರಾಮ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ತಿಪಟೂರು

ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರಬರಲು ಸರಿಯಾದ ಯೋಜನೆ ಮತ್ತು ನಿರಂತರ ಪರಿಶ್ರಮ ಅಗತ್ಯವೆಂದು ಖ್ಯಾತ ನಟ ಹಾಗೂ ನಿರ್ಮಾಪಕರಾದ ರಕ್ಷರಾಮ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ನಗರದ ಕೆಐಟಿ ಕಾಲೇಜಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡಿನ ನುಡಿ, ನೆಲ-ಜಲ ಹಾಗೂ ಭಾಷಾಭಿಮಾನವನ್ನು ಕಾಪಾಡುವ ಹೊಣೆಗಾರಿಕೆ ಯುವಕರ ಮೇಲಿದೆ. ಕನ್ನಡ ನಾಡಿನ ಉಳಿವಿಗಾಗಿ ಚಲನಚಿತ್ರರಂಗ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಜನಮನದಲ್ಲಿ ಕನ್ನಡದ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೆಚ್ಚಿಸುತ್ತಿದೆ. ತಮ್ಮ ಮುಂಬರುವ ಚಿತ್ರ ಬರ್ಮಾ ಕುರಿತು ಸಂಕ್ಷಿಪ್ತವಾಗಿ ವಿವರಿಸಿ, ಅದರ ಪ್ಪಿಂಗ್ ಪ್ರದರ್ಶಿಸಲಾಯಿತು.

ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಿ.ಎಸ್.ಉಮೇಶ್ ಮಾತನಾಡಿ, ಕಲೆ ಮತ್ತು ಪ್ರತಿಭೆ ಯಾರ ಸ್ವತ್ತಲ್ಲ ಅದು ಸತತ ಸಾಧನೆಯಿಂದ ಸಾರ್ಥಕ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಚಿಕ್ಕ ವಯಸ್ಸಿನಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರಕ್ಷರಾಮ್ ಅವರೇ ಅದರ ಪ್ರತ್ಯಕ್ಷ ಸಾಕ್ಷಿಯಾಗಿ ನಮ್ಮ ಮುಂದಿದ್ದಾರೆ. ತಿಪಟೂರಿನ ಕೆ.ವಿ.ಎಸ್. ಖಜಾಂಚಿ ಟಿ.ಎಸ್.ಶಿವಪ್ರಸಾದ್ ಇವರ ಅಳಿಯ ರಕ್ಷರಾಮ್ ಅವರು ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆದಿದ್ದು, ನಟನಾಗಿ, ಸಹ ನಿರ್ದೇಶಕರಾಗಿ, ಬಳಿಕ ನಿರ್ಮಾಪಕರಾಗಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿರುವುದು ಪ್ರಶಂಸನೀಯ ಸಾಧನೆ. ಇಷ್ಟು ಕಿರಿಯ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡಿರುವುದು ಅತ್ಯಂತ ಮೆಚ್ಚುವಂತಹದು. ಪ್ರೇಕ್ಷಕರ ಬೆಂಬಲವೂ ಅವರಿಗೆ ನಿತ್ಯ ನಿರಂತರವಾಗಿ ದೊರೆಯಲಿದೆ ಎಂದು ಹಾರೈಸಿ, ಅವರ ಚಿತ್ರಗಳು ತಿಪಟೂರಿನಿಂದ ರಾಜ್ಯಮಟ್ಟಕ್ಕೆ ಹಾಗೂ ರಾಷ್ಟ್ರಮಟ್ಟಕ್ಕೆ ಪ್ರಸಿದ್ಧಿಯಾಗಲಿ ಎಂದು ತಿಳಿಸಿದರು.

ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಂ ಗ್ರೂಪ್ ವತಿಯಿಂದ ಪ್ರಾರ್ಥನೆ ನೆರವೇರಿಸಲಾಯಿತು. ನೃತ್ಯಾಂಜಲಿ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕಲ್ಪತರು ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರದರ್ಶನಗಳು ಮನಮೋಹಕವಾಗಿ ಮೂಡಿಬಂದವು. ನೃತ್ಯ ತರಂಗ ತಂಡದಿಂದ ಫ್ರೀ ಸ್ಟೈಲ್ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಡ್ಯಾನ್ಸ್ ಆಫ್ ದ ಡಿವೈನ್ ತಂಡದವರಿಂದ ದೈವಿಕ ನೃತ್ಯ ಮನಸೋರೆಗೊಂಡಿತು. ಗ್ಯಾಲಕ್ಸಿ ತಂಡದಿಂದ ಫ್ಯಾಷನ್ ಷೋ ವೈವಿಧ್ಯಮಯವಾಗಿ ನಡೆಯಿತು. ಸಮನ್ವಯ ತಂಡದವರಿಂದ ಫ್ಯೂಷನ್ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

ಉಪಾಧ್ಯಕ್ಷರುಗಳಾದ ಬಾಗೇಪಲ್ಲಿ ನಟರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಆರ್.ಎಂ.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಹಾಗೂ ರಾಷ್ಟ್ರೀಯ ಕ್ರೀಡಾಪಟು ಮತ್ತು ಖಜಾಂಚಿಗಳಾದ ಟಿ.ಎಸ್.ಶಿವಪ್ರಸಾದ್ ಮತ್ತು ಡಾ.ಎಚ್.ಸಿ.ಸತೀಶ್‌ಕುಮಾರ್. ಕೆ.ಐ.ಟಿ. ಪ್ರಾಂಶುಪಾಲರು ಹಾಗೂ ಕೆ.ಐ.ಟಿ. ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎಸ್. ಜಯಂತ್ ಸಾಂಸ್ಕೃತಿಕ ಸಂಯೋಜಕಿ ಡಾ.ಚಂದ್ರಕಲಾ ಇತರರು ಇದ್ದರು.