ಮಕ್ಕಳು ದೇಶದ ಭವಿಷ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಕಳಂಕವಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶತೆ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಪೋಷಕರು ಮನೆಯಲ್ಲಿ ಈ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೊನ್ನಾಳಿ ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ತಿಳಿಸಿದ್ದಾರೆ.

- ಸುರಕ್ಷಿತ ಬಾಲ ಅಭಿಯಾನ ಫೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಮಕ್ಕಳು ದೇಶದ ಭವಿಷ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ಸಮಾಜಕ್ಕೆ ಕಳಂಕವಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸ್ಪರ್ಶತೆ ಬಗ್ಗೆ ಅರಿವು ಇರುವುದಿಲ್ಲ. ಆದ್ದರಿಂದ ಪೋಷಕರು ಮನೆಯಲ್ಲಿ ಈ ಬಗ್ಗೆ ಸೂಕ್ತ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೊನ್ನಾಳಿ ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ತಿಳಿಸಿದರು.

ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಕೆಪಿಎಸ್‌ ಶಾಲೆಯಲ್ಲಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಆದೇಶ ಅನ್ವಯ, ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶದಂತೆ, ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜ್ಞಾಪನದಂತೆ, ಹೊನ್ನಾಳಿ ವಕೀಲರ ಸಂಘದ ಪದಾಧಿಕಾರಿಗಳಿಂದ ಸುರಕ್ಷಿತ ಬಾಲ ಅಭಿಯಾನ ಫೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಸಮಾಜದಲ್ಲಿ ಮಕ್ಕಳ ಸುರಕ್ಷತೆ ಅತ್ಯಂತ ಮಹತ್ವದ ವಿಷಯವಾಗಿದೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಶೋಷಣೆ ಹಾಗೂ ಕಿರುಕುಳ ತಡೆಗಟ್ಟಲು ಭಾರತ ಸರ್ಕಾರ ಫೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಶಾಲೆ ಮತ್ತು ಮನೆಗಳಲ್ಲಿ ಯಾವುದೇ ವ್ಯಕ್ತಿ ತಮಗೆ ಅಸಹಜವಾಗಿ ಮುಜುಗರ ತರುವಂತೆ ಸ್ಪರ್ಶಿಸಿದರೆ ಮಕ್ಕಳು ತಕ್ಷಣವೇ ತಮ್ಮ ಪೋಷಕರಿಗೆ ಅಥವಾ ಶಿಕ್ಷಕರಿಗೆ ಧೈರ್ಯವಾಗಿ ತಿಳಿಸಬೇಕು ಎಂದು ಹೇಳಿದರು.

ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗುವೆಂದು ಪರಿಗಣಿಸಲಾಗುತ್ತಿದ್ದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಗಂಡುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೂ ಅನ್ವಯ ಆಗುತ್ತದೆ. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದರೆ, ಅದನ್ನು ಪೊಲೀಸ್‌ ಅಥವಾ ಮಕ್ಕಳ ಸಹಾಯವಾಣಿಗೆ ತಿಳಿಸುವುದು ಕಡ್ಡಾಯವಾಗಿದೆ. ಮಾಹಿತಿ ಮುಚ್ಚಿಡುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದ ಅವರು, ಮಕ್ಕಳ ಮೇಲಿನ ದೌರ್ಜನ್ಯ ಕಂಡರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೊನ್ನಾಳಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಬಿ.ಉಮೇಶ್‌, ವಕೀಲರಾದ ಎಂ.ಕೆ.ಹಳದಪ್ಪ, ಬಿ.ಷಣ್ಮುಖ, ಕುಮಾರಿ ರಚಿತಾ, ಶಾಲೆಯ ಮುಖ್ಯ ಶಿಕ್ಷಕ ಡಿ.ರಾಮಪ್ಪ, ಸಹಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಇದ್ದರು.

- - -

-ಚಿತ್ರ: ಸುರಹೊನ್ನೆ ಪಿಎಂಶ್ರೀ ಕೆಪಿಎಸ್‌ ಶಾಲೆಯಲ್ಲಿ ಹೊನ್ನಾಳಿ ವಕೀಲರ ಸಂಘದಿಂದ ಸುರಕ್ಷಿತ ಬಾಲ ಅಭಿಯಾನ ಫೋಕ್ಸೋ ಕಾಯ್ದೆಯ ಜಾಗೃತಿ ಕಾರ್ಯಕ್ರಮ ನಡೆಯಿತು.