ಕನ್ನಡಪ್ರಭ ವಾರ್ತೆ ಮಾಲೂರು
ಜೀವಿಸುವುದಕ್ಕೆ ನೀರು ಅತಿ ಮುಖ್ಯವಾಗಿದ್ದು, ಒಂದು ವೇಳೆ ಆಹಾರವಿಲ್ಲದೆ ಕೆಲವು ದಿನ ಬದುಕಬಹುದು. ಆದರೆ ನೀರಿಲ್ಲದೆ ಜೀವನ ಅಸಾಧ್ಯ. ಆದರೆ ಮಾನವನ ಅತಿಯಾದ ಸ್ವಾರ್ಥದಿಂದ ಅನೇಕ ಜಲಮೂಲಗಳು ಇಂದು ಅಪಾಯದಲ್ಲಿವೆ. ಅರಣ್ಯ ನಾಶ, ಹವಾಮಾನ ಬದಲಾವಣೆ ಹಾಗೂ ನೀರಿನ ಅಸಮರ್ಪಕ ಬಳಕೆಯಿಂದ ನೀರಿನ ಮೂಲಗಳು ಕ್ಷೀಣಿಸುತ್ತಿವೆ. ನೀರಿನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಜೆ.ಶಿಲ್ಪಾ ಹೇಳಿದರು. ನಗರಸಭೆಯ ಸಭಾಂಗಣದಲ್ಲಿ ಕಾನೂನು ಸೇವೆಗಳಪ್ರಾಕಾರ ನಗರಸಭೆ ವಕೀಲರಸಂಘ ಸಹಯೋಗದಲ್ಲಿ ನೀರನ್ನು ಉಳಿಸೋಣ ಭವಿಷ್ಯವನ್ನು ಕಾಪಾಡೋಣ ಎಂಬ ಘೋಷವಾಕ್ಯ ದೊಂದಿಗೆ ಏರ್ಪಡಿಸಲಾಗಿದ್ದ ವಿಶ್ವ ಜಲ ದಿನ ೨೦೨೬ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವದ ಹಲವಾರು ಭಾಗಗಳಲ್ಲಿ ಜನರು ಶುದ್ಧಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದರು.ಹವಾಮಾನ ಬದಲಾವಣೆ, ಅತಿಯಾದ ಬಳಕೆ ಹಾಗೂ ನೈರ್ಮಲ್ಯದ ಕೊರತೆಗಳಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅನೇಕ ಮಕ್ಕಳ ಆರೋಗ್ಯಕ್ಕೂ ಇದರಿಂದ ಅಪಾಯ ಉಂಟಾಗುತ್ತಿದೆ. ನೀರನ್ನು ಉಳಿಸುವುದು, ಮಿತವಾಗಿ ಬಳಸುವುದು ಮತ್ತು ಜಲಮೂಲಗಳನ್ನು ಕಾಪಾಡುವುದು ನಮ್ಮಪ್ರತಿಯೊಬ್ಬರ ಜವಾಬ್ದಾರಿ. ನೀರು ಉಳಿಸಿದರೆ ಜೀವನ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತ ಎಂ.ಎಸ್.ಮಹದೇವ್, ವಕೀಲರಾದ ಬಿ.ನಾರಾಯಣಸ್ವಾಮಿ, ರಾಜೇಶ್, ಸಿ.ಮುನಿಯಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ರಾಜಣ್ಣ , ಸಿಬ್ಬಂದಿ ನಾಗರಾಜ್ ಇನ್ನಿತರರು ಹಾಜರಿದ್ದರು.