ಆಸ್ತಿ, ಅಂತಸ್ತು, ಸಂಪತ್ತಿಗೆ ಕೊನೆಯಿದೆ, ವಿದ್ಯೆಗಿಲ್ಲ

| Published : Jan 17 2025, 12:46 AM IST

ಸಾರಾಂಶ

ತಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ತಾವು ಕಲಿತಿರುವ ವಿದ್ಯೆ ಮಾತ್ರ ಕೊನೆಯವರೆಗೂ ತಮ್ಮ ಜತೆಗಿರುತ್ತದೆ ಎಂದು ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ತಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ತಾವು ಕಲಿತಿರುವ ವಿದ್ಯೆ ಮಾತ್ರ ಕೊನೆಯವರೆಗೂ ತಮ್ಮ ಜತೆಗಿರುತ್ತದೆ ಎಂದು ನಿವೃತ್ತ ಶಿಕ್ಷಕ ವಿ.ವಿ.ಅರಕೇರಿ ಹೇಳಿದರು.

ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ (ಕಲ್ಮೇಶ್ವರ) ಶಾಲೆಯ 1972-78ನೇ ಬ್ಯಾಚ್‌ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹಿತರ ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.

ಇನ್ನೊರ್ವ ನಿವೃತ್ತ ಶಿಕ್ಷಕ ಎಚ್.ಎನ್.ಮುರನಾಳ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಂದೇ ತರಗತಿಯಲ್ಲಿ ಓದಿದ ವಿದ್ಯಾರ್ಥಿಗಳೆಲ್ಲರನ್ನೂ 47 ವರ್ಷದ ನಂತರ ಒಟ್ಟು ಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇದೀಗ ಅಗತ್ಯವಿದೆ ಎಂದರು.

ಡಾ.ಜಯಕುಮಾರ ಕಂಕಣವಾಡಿ ತಮ್ಮ ಅನಿಸಿಕೆಗಳನ್ನು ಹೇಳುತ್ತಾ ಕಲಿತ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಅತ್ಯಮೂಲ್ಯವಾದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದು ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವುದು ಒಂದು ಉತ್ತಮ ಭಾರತೀಯ ಸಂಸ್ಕೃತಿ ಎಂದು ಹೇಳಿದ ಅವರು, ಸರಿ ಸುಮಾರು 47 ವರ್ಷಗಳ ಹಿಂದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಸ್ನೇಹಿತರನ್ನು ಮತ್ತು ಸೇವೆ ಸಲ್ಲಿಸಿದ ಶಿಕ್ಷಕರನ್ನು ಒಂದೆಡೆಗೆ ಸೇರಿಸಿ ಗೌರವಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ವಿಜಯ ವಸ್ತ್ರದ, ಅಶೋಕ ಕರೆಹೊನ್ನ, ಉಮಾ ಘಾಟಗೆ, ಜ್ಯೋತಿ ಪ್ರಭು ಸೇರಿ ಇತರರು ತಮ್ಮ ಅನಿಸಿಕೆ ಹಂಚಿಕೊಂಡರು. ರಾಜಶೇಖರ ಅಂಗಡಿ, ಅಶೋಕ ತಳವಾರ, ಗೋಪಾಲ ಇಂಗಳೆ, ಬಸೀರ ನಧಾಪ್ ಅವರ ಸಾಧನೆ ಗುರುತಿಸಿ ಸತ್ಕರಿಸಲಾಯಿತು. ಮ್ಯಾಜಿಕ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಚಂದ್ರಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಮನೋಜ ಕೋಳಿ ಅತಿಥಿ ಪರಿಚಯಿಸಿದರು. ಸುನಂದಾ ಮೆಳ್ಳಿಗೇರಿ ತಂಡದವರು ಪ್ರಾರ್ಥಿಸಿ, ವಿಜಯ ವಸ್ತ್ರದ ಸ್ವಾಗತಿಸಿ, ಮಾರುತಿ ಮೋಶಿ ಮತ್ತು ಕಣಬೂರ ನಿರೂಪಿಸಿ, ಡಾ.ಜಯಕುಮಾರ ಕಂಕಣವಾಡಿ ವಂದಿಸಿದರು.

ಸಂಜು ವಾಲಿ, ರಾಹುಲ್ ಶಹಾ, ಕಿರಣ ಹೊನವಾಡ, ಮನೋಹರ ಕಂಕಣವಾಡಿ, ಮಲ್ಲಿಕಾರ್ಜುನ ಹಿರೇಮಠ, ಸಂಗಮೇಶ ಅಂಗಡಿ, ರಾಜಶೇಖರ ಅಂಗಡಿ, ಸುನಂದಾ ಮೆಳ್ಳಿಗೇರಿ, ಜ್ಯೋತಿ ಪ್ರಭು, ಉಮಾ ಘಾಟಗೆ, ವಿಜಯಾ ಗುರವ, ಜಯಶ್ರೀ ಬಾಡಗಿ, ಅಶೋಕ ಕರೆಹೊನ್ನ, ಮನೋಜ ಕೋಳಿ, ಚಂದ್ರಶೇಖರ ಪಾಟೀಲ, ಮಲ್ಲು ಉದಾಸೀಮಠ ಸೇರಿದಂತೆ ಇತರರು ಕಾರ್ಯಕ್ರಮ ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕರಿಗೆ ಮತ್ತು ಗೆಳೆಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.